ಮುಂಬಯಿ: ಚಿಣ್ಣರ ಬಿಂಬ ಮುಂಬಯಿ ಇದರ ಪೊವಾಯಿ ವಲಯದ ಶಿಬಿರಗಳ ಮಕ್ಕಳ ಪ್ರತಿಭಾ ಸ್ಪರ್ಧೆಯು ಅ. 22ರಂದು ಅಪರಾಹ್ನ ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಸಭಾಗೃಹದಲ್ಲಿ ನಡೆಯಿತು.
ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದಲ್ಲಿ ಉಮಾಮಹೇಶ್ವರಿ, ಗೀತಾಂಬಿಕಾ ಹಾಗೂ ಎಸ್‌ಎಂ ಶೆಟ್ಟಿ ಪೊವಾಯಿ ವಲಯದ ಪಾಲಕರ ಚರ್ಚೆಯು ನೆರೆದ ಸಭಿಕರ ಮೆಚ್ಚುಗೆಯನ್ನು ಪಡೆಯಿತು. ಮನೆಕೆಲಸದಲ್ಲಿ ಪುರುಷರು ಮಹಿಳೆಗೆ ಸಹಕರಿಸಬೇಕು ಹಾಗೂ ಸಹಕರಿಸಬಾರದು ಎಂಬ ವಿಷಯದಲ್ಲಿ ಚರ್ಚೆ ಏರ್ಪಟ್ಟಿತ್ತು. ಇಲ್ಲಿ ಪುರುಷರು ಮತ್ತು ಮಹಿಳೆಯರ ತಂಡವನ್ನು ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿಯವರು ರೂಪಿಸಿ ವಿಷಯದ ಪರವಾಗಿ ಸ್ತ್ರೀಯರು ಹಾಗೂ ವಿಷಯದ ವಿರುದ್ಧವಾಗಿ ಪುರುಷರ ನಡುವೆ ಚರ್ಚೆ ನಡೆಯಿತು.
ಪುರುಷರ ತಂಡದಲ್ಲಿ ಕವಿ, ಕತೆಗಾರ ಪೇತ್ರಿ ವಿಶ್ವನಾಥ ಶೆಟ್ಟಿ, ರಮೇಶ ರೈ ಕೈಯಾರುಗುತ್ತು, ಸಂಜೀವ ಪೂಜಾರಿ ತೋನ್ಸೆ, ಭಾಸ್ಕರ ಸುವರ್ಣ ಸಸಿಹಿತ್ಲು, ಪ್ರಕಾಶ್ ರೈ, ಪ್ರಭಾಕರ ಶೆಟ್ಟಿ ಪಣಿಯೂರು ಅವರು ಪಾಲ್ಗೊಂಡಿದ್ದರು. ಮಹಿಳಾ ತಂಡದಲ್ಲಿ ಪ್ರಶಾಂತಿ ಡಿ. ಶೆಟ್ಟಿ, ಸವಿತಾ ಕೆ. ಶೆಟ್ಟಿ, ಶೋಭಾ ಶೆಟ್ಟಿ, ಪುಷ್ಪಾ ಶೆಟ್ಟಿ, ಅನಿತಾ ಎಸ್. ಶೆಟ್ಟಿ ಹಾಗೂ ಡಾ| ಪೂರ್ಣಿಮಾ ಎಸ್. ಶೆಟ್ಟಿ ಭಾಗವಹಿಸಿದ್ದರು. ಸತೀಶ್ ಸಾಲ್ಯಾನ್ ಅವರು ಸಮನ್ವಯಕರಾಗಿ ಚರ್ಚೆಯನ್ನು ನಡೆಸಿಕೊಟ್ಟರು.
ಚಿಣ್ಣರ ಬಿಂಬದ ರೂವಾರಿಗಳಾದ ಪ್ರಕಾಶ್ ಭಂಡಾರಿ, ಸುರೇಂದ್ರ ಕುಮಾರ ಹೆಗ್ಡೆ, ರೇಣುಕಾ ಭಂಡಾರಿ, ಮುದ್ರಾಡಿ ದಿವಾಕರ ಶೆಟ್ಟಿ, ಸತೀಶ್ ಶೆಟ್ಟಿ ಪೆನಿನ್ಸುಲಾ, ಚಂದ್ರಹಾಸ ರೈ ಬೊಳ್ನಾಡುಗುತ್ತು, ಡಾ| ಕರುಣಾಕರ ಶೆಟ್ಟಿ ಪಣಿಯೂರು, ನಾಗರಾಜ ಗುರುಪುರ ಮೊದಲಾದ ಗಣ್ಯರು ಹಾಗೂ ಚಿಣ್ಣರ ಬಿಂಬದ ಥಾಣೆ, ಕಲ್ವಾ, ಘೋಡ್‌ಬಂದರ್, ಪೇಜಾವರ ಹೀಗೆ ವಿವಿಧ ಶಿಬಿರಗಳ ಕಾರ್ಯಕರ್ತರು, ಪಾಲಕರು, ಚಿಣ್ಣರು ಉಪಸ್ಥಿತರಿದ್ದರು.
ಪ್ರತಿವರ್ಷ ಪಾಲಕರಿಗಾಗಿ ಭಾವಗೀತೆ, ಜಾನಪದ ಗೀತೆಗಳ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಈ ವರ್ಷ ಪ್ರತಿ ವಲಯದಲ್ಲಿ ಪಾಲಕರಿಗಾಗಿ ಚರ್ಚಾ ಗೋಷ್ಠಿಯನ್ನು ಏರ್ಪಡಿಸಿದ್ದು ವಿಶೇಷವಾಗಿದೆ. ಇದರ ಮೂಲಕ ಪಾಲಕರ ವಾಕ್ಚಾತುರ್ಯಕ್ಕೆ ವಿಶೇಷವಾದ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಭಾಯಂದರ್, ಮೀರಾರೋಡ್ ವಲಯ, ವಿಕ್ರೋಲಿ, ಮುಲುಂಡ್ ಥಾಣೆ ವಲಯ ಹಾಗೂ ಕಲ್ವಾ, ಘೋಡ್‌ಬಂದರ್ ವಲಯಗಳ ಪಾಲಕರ ಚರ್ಚೆ ಯಶಸ್ವಿಯಾಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.