ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಚಿಣ್ಣರ ಚಂದ್ರ’ ಎಂಬ ಮಕ್ಕಳ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ.
ತಮ್ಮ ರಚನೆಯ “ಅಡಗೂಲಜ್ಜಿ’ ಎಂಬ ಕಾದಂಬರಿಯನ್ನೇ ಆಧರಿಸಿ ಚಿತ್ರ ಮಾಡಿದ್ದು, ಬರಗೂರು ಅವರ ಮೊಮ್ಮಗ ಆಕಾಂಕ್ಷ್ ಬರಗೂರ್ “ಚಿಣ್ಣರ ಚಂದ್ರ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಚಿಣ್ಣರ ಚಂದ್ರ’ ಚಿತ್ರವು ಮಕ್ಕಳಿಗೆ ಅಗತ್ಯವಾದ ಉತ್ತಮ ಶಿಕ್ಷಣ, ಕ್ರೀಡೆ ಮುಂತಾದ ಆಶಯಗಳ ಜೊತೆಗೆ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುತ್ತದೆ.
ಈ ಸಿನಿಮಾದಲ್ಲಿ ಅಡಗೂಲಜ್ಜಿಯ ಪಾತ್ರದ ಮೂಲಕ ಮಕ್ಕಳಿಗೆ ಜನಪದ ಕತೆಗಳ ಪರಿಚಯವಾಗುತ್ತದೆ. ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಧಕ್ಕೆ ಬರುತ್ತದೆಯೆಂದು ಕೊಂಡಾಗ ಅಡಗೂಲಜ್ಜಿಯು ಸಿನಿಮಾ ಕತೆಗಳನ್ನೇ ಜನಪದ ಕತೆಗಳನ್ನಾಗಿಸಿ ಮಕ್ಕಳು ಮತ್ತು ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಕಥನದ ಮಹತ್ವದ ಜೊತೆಗೆ ಜಾನಪದವು ಆಧುನಿಕ ರೂಪ ಪಡೆಯುವ ಹೊಸ ವಿಧಾನವನ್ನು ನಿರೂಪಿಸಲಾಗಿದೆ. ಜಾನಪದಕ್ಕೆ ಅಂತ್ಯವಿಲ್ಲವೆಂದು ಧ್ವನಿಸಲಾಗಿದೆ. ಸಿನಿಮಾ ಕೂಡ ಒಂದು ಜಾನಪದವಾಗುವುದನ್ನು ಸಾಂಕೇತಿಕವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಚಿತ್ರತಂಡದ ಮಾತು.
ಆಕಾಂಕ್ಷ್ ಬರಗೂರ್ ಸೇರಿದಂತೆ ಈಶಾನ್ ಪಾಟೀಲ್, ನಿಕ್ಷೇಪ್, ಅಭಿನವ್ ನಾಗ್, ಶಡ್ಜಹೆಗ್ಡೆ ಮುಂತಾದ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಂದರರಾಜ್, ರೇಖಾ, ರಾಧಾ ರಾಮಚಂದ್ರ, ರಾಘವ್, ಸುಂದರರಾಜ ಅರಸು, ಹಂಸ, ವೆಂಕಟರಾಜು, ಗೋವಿಂದರಾಜು, ವತ್ಸಲಾ ಮೋಹನ್, ರಾಜಪ್ಪ ದಳವಾಯಿ ಅಭಿನಯಿಸಿದ್ದಾರೆ.
“ಚಿಣ್ಣರ ಚಂದ್ರ’ ಚಿತ್ರಕ್ಕೆ ಗೋವಿಂದರಾಜ್ ನಿರ್ಮಾಣವಿದ್ದು, ಬರಗೂರರು ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.