ಮುಂಬಯಿ: ಚಿಣ್ಣರ ಬಿಂಬದ ಚಟುವಟಿಕೆಗಳ ಬಗ್ಗೆ ಪರೋಕ್ಷವಾಗಿ ಅರಿತಿದ್ದ ನಾನು ಅದನ್ನು ನನ್ನ ಶಾಲೆಯಲ್ಲೂ ಪ್ರಾರಂಭಿಸಬೇಕು, ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ಸಣ್ಣ ಪ್ರಯತ್ನ ನನ್ನಿಂದಾಗಬೇಕು ಎಂಬ ಉದ್ದೇಶವನ್ನು ಹೊಂದಿದವನು ನಾನು. ಆ ದಿನ ಇಂದು ಕೂಡಿ ಬಂದಿದೆ ಎಂದು ಮಲಾಡ್ ಪರಿಸರದ ಪ್ರಸಿದ್ಧ ವಿದ್ಯಾಸಂಸ್ಥೆ ಚಿಲ್ಡ್ರನ್ಸ್ ಅಕಾಡೆಮಿ ಇದರ ಕಾರ್ಯಾಧ್ಯಕ್ಷ ರೋಹನ್ ಭಟ್ ಅವರು ಅಭಿಪ್ರಾಯಿಸಿದರು.
ಜೂ. 23ರಂದು ಮಲಾಡ್‌ನಚಿಲ್ಡ್ರನ್ಸ್ ಅಕಾಡೆಮಿಯ ಸಭಾ ಗೃಹದಲ್ಲಿ ಮಲಾಡ್ ಇಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಮಲಾಡ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯನ್ನು ಕಂಡು ಮನಸ್ಸಿಗೆ ಸಂತೋಷವಾಯಿತು. ಇಂತಹ ಅರ್ಥವತ್ತಾದ ಸಂಸ್ಥೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ನುಡಿದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸದ್ಗುರು ಹೊಟೇಲ್ ಮಾಲಕ ಮುಂಡಪ್ಪ ಪಯ್ಯಡೆ ಇವರು ಮಾತನಾಡಿ, ಇಂದು ಚಿಣ್ಣರ ಬಿಂಬದಂತಹ ಸಂಸ್ಥೆಗಳ ಅಗತ್ಯವಿದ್ದು, ಇದರ ಹುಟ್ಟಿಗೆ ಕಾರಣರಾದ ಇದರ ಸರ್ವ ಪದಾಧಿಕಾರಿಗಳಿಗೆ ನನ್ನ ವಂದನೆಗಳು. ಇಲ್ಲಿನ ಮಕ್ಕಳ ಪ್ರತಿಭೆಯನ್ನು, ಸಂಸ್ಕಾರವನ್ನು ಕಂಡಾಗ ಸಂತೋಷವಾಗುತ್ತದೆ. ಇಂತಹ ಸಂಸ್ಥೆಗಳಿಗೆ ನಾವು ಸಹಕಾರ ನೀಡಬೇಕು. ಜೊತೆಗೆ ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗವನ್ನು ಪಡೆಯುವಂತಾಗಬೇಕು. ಜ್ಞಾನದಿಂದ ವಿನಯ ಬರುತ್ತದೆ. ಅದಕ್ಕೊಂದು ಉತ್ತಮ ನಿದರ್ಶನ ಚಿಣ್ಣರ ಬಿಂಬದ ಮಕ್ಕಳು. ಇಂತಹ ಸಂಸ್ಥೆಗೆ ಸ್ಥಳಾವಕಾಶವನ್ನು ನೀಡಿದ ರೋಹನ್ ಭಟ್ ಇವರ ಕಾರ್ಯ, ನಾಡು-ನುಡಿಯ ಅಭಿಮಾನ ಮೆಚ್ಚುವಂಥದ್ದಾಗಿದೆ ಎಂದರು.
ಇನ್ನೋರ್ವ ಅತಿಥಿ ಸತೀಶ್ಚಂದ್ರ ಕಾಮತ್ ಇವರು ಮಾತನಾಡಿ, ಚಿಣ್ಣರ ಬಿಂಬದಲ್ಲಿ ಭಾಷಾ ಪ್ರೇಮದ ಜೊತೆಗೆ ದೇಶಪ್ರೇಮವನ್ನು ಕಲಿಸಿ ಕೊಡುತ್ತಾರೆ. ಇಲ್ಲಿನ ಮಕ್ಕಳಿಗೆ ನಾಡಿನ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದ್ದು, ಎಲ್ಲಿ ದೇವರ ಭಜನೆ ಇದೆಯೋ, ಅಲ್ಲಿ ವಿಭಜನೆಯ ಇಲ್ಲ. ಅಂದರೆ ಚಿಣ್ಣರ ಬಿಂಬದಲ್ಲಿ ಕಲಿತ ಮಕ್ಕಳಲ್ಲಿ ಒಗ್ಗಟ್ಟು ಇದೆ ಎಂದರು.
ಪ್ರಾರಂಭದಲ್ಲಿ ಅವೆನ್ಯೂ ಹೊಟೇಲ್‌ನ ಮಾಲಕರಾದ ರಘುರಾಮ್ ಶೆಟ್ಟಿ ಅವರು ದೀಪಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು. ಚಿಣ್ಣರ ಬಿಂಬದ ರೂವಾರಿಗಳಲ್ಲೋರ್ವರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ವಿವರಿಸಿದರು.
ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಚಿಣ್ಣರ ಬಿಂಬದ ಪಾತ್ರದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ರಮೇಶ್ ರೈ, ವಿಜಯ ಕೋಟ್ಯಾನ್, ಜಗದೀಶ್ ರಾವ್, ರವಿ ಹೆಗ್ಡೆ ಇವರು ಉಪಸ್ಥಿತರಿದ್ದರು. ಶಿಬಿರದ ವಿದ್ಯಾರ್ಥಿಗಳಾದ ಗೌರಿ ಶೆಟ್ಟಿ, ಭೂಮಿ ಸುವರ್ಣ, ಸ್ನೇಹಾ ಗೌಡ ಅವರು ಅತಿಥಿಗಳನ್ನು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.
ವಿಕ್ರಮ್ ಪಾಟ್ಕರ್ ಮತ್ತು ವೈಷ್ಣವಿ ಸಫಲಿಗ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಯಶಸ್ವಿಗಾಗಿ ಶೇಖರ್ ಪೂಜಾರಿ, ಉಷಾ ಸಫಲಿಗ, ಸುಜಾತಾ ಗೌಡ, ತನುಜಾ ಸುವರ್ಣ, ಲಕ್ಷ್ಮೀ ಶೆಟ್ಟಿ, ಸರಿತಾ ಪಾಟ್ಕರ್, ಪೂರ್ಣಿಮಾ ಕುಲಾಲ್, ಅಮೃತಾ ಹೆಗ್ಡೆ, ಸುಮಾ ಪಾಟ್ಕರ್ ಅವರು ಸಹಕರಿಸಿದರು. ಸಭಾ ಕಾರ್ಯಕ್ರಮದ ಅನಂತರ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಜರಗಿತು.