Advertisement

ಚಿಣ್ಣರ ಬಿಂಬ ಐರೋಲಿ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

03:56 PM Sep 23, 2018 | |

ಮುಂಬಯಿ: ಚಿಣ್ಣರ ಬಿಂಬ ಇದರ ಐರೋಲಿ ಶಿಬಿರದ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯು ಸೆ. 16ರಂದು ಅಪರಾಹ್ನ ಐರೋಲಿ ಸೆಕ್ಟರ್‌ 6 ರಲ್ಲಿರುವ ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ ಸಭಾಗೃಹದಲ್ಲಿ ನಡೆಯಿತು.
ದೀಪಪ್ರಜ್ವಲನೆಯ ಮೂಲಕ ಚಿಣ್ಣರ ಬಿಂಬದ ಮಕ್ಕಳ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಐರೋಲಿ ಶ್ರೀ ವಿಷ್ಣು ಸಹಸ್ರ ನಾಮ ಮಂಡಳಿಯ ಮುಖ್ಯಸ್ಥ ಸತೀಶ್‌ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ, ಸಲಹಾ ಸಮಿತಿಯ ಸದಸ್ಯ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಶಿಕ್ಷಕಿಯರಾದ ರೂಪಾ ಶೆಟ್ಟಿ, ಗೀತಾ ಹೇರಳ,  ಶಿಬಿರದ ಮುಖ್ಯಸ್ಥೆ ಆಶಾ ಪೂಜಾರಿ, ಸಾಂಸ್ಕೃತಿಕ ಮುಖ್ಯಸ್ಥೆ ಸುಜಾತಾ ಉದಯ ಶೆಟ್ಟಿ ಉಪಸ್ಥಿತರಿದ್ದರು. ಚಿಣ್ಣರ ಬಿಂಬದ ಮಕ್ಕಳು ಪ್ರಾರ್ಥನೆಗೈದರು.

Advertisement

ಸತೀಶ್‌ ಶೆಟ್ಟಿ ಇವರು ಮಾತನಾಡಿ, ಮಕ್ಕಳಿಗೆ ಎಳವೆಯಲ್ಲಿ ಒಳ್ಳೆಯ ಸಂಸ್ಕಾರ ಕಲಿಸಬೇಕು. ಈಗ ಸಂಸ್ಕಾರದ ಮೌಲ್ಯ ಕಡಿಮೆಯಾಗಿದೆ. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ನಾನು ಎಂಬ ಅಹಂನ್ನು ಬಿಟ್ಟು ನಾವೆಲ್ಲರೂ ಎಂಬ ಭಾವನೆ ಯನ್ನು ಬೆಳೆಸಿಕೊಳ್ಳಬೇಕು. ತಪ್ಪು ಮಾಡಿದರೆ ಕ್ಷಮೆ ಕೇಳುವ ಒಳ್ಳೆಯ ಗುಣವನ್ನು ಕಲಿಸಬೇಕು. ಆಗ ನಮ್ಮ ಸಮಾಜ ಶ್ರೇಷ್ಠ ಸಮಾಜವಾಗುತ್ತದೆ ಎಂದು ನುಡಿದರು.

ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಇವರು ಮಾತನಾಡಿ, ಚಿಣ್ಣರ ಬಿಂಬದಲ್ಲಿ ಪಾಲಕರೇ ಆಧಾರಸ್ತಂಭ. ನಮ್ಮ ಸಂಸ್ಥೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಅವರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ. ಸಮಯ ಪರಿಪಾಲನೆಯಿಂದ ಇದರ ಅಭಿವೃದ್ದಿಯಾಗುತ್ತದೆ. ಮಕ್ಕಳನ್ನು ತಿದ್ದಿ ತೀಡುವಲ್ಲಿ ಶಿಕ್ಷಕರೊಂದಿಗೆ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದು ನುಡಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಗೀತಾ ಹೇರಳ ಅವರು, ತನ್ನ ಶಿಬಿರದ ಚಿಣ್ಣರು, ಪಾಲಕರ ಸಹಕಾರವನ್ನು ಶ್ಲಾಘಿಸಿದರು. ರೂಪಾ ಶೆಟ್ಟಿ ಅವರು ಮಾತನಾಡಿ, ಮಕ್ಕಳು ಚೆನ್ನಾಗಿ ಮಾತನಾಡುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಮಕ್ಕಳಿಗೆ ಸಭಾ ಕಂಪನ ನೀಗಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದೆ ಎಂದರು.

ಅತಿಥಿ-ಗಣ್ಯರನ್ನು ಚಿಣ್ಣರು ಗೌರವಿಸಿದರು. ಶ್ರೇಯಾ ಕಾಂಚನ್‌, ಸಾನಿಕಾ ಶೆಟ್ಟಿ, ಶ್ರಾವಣಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶಿಬಿರದ ಮುಖ್ಯಸ್ಥೆ ಆಶಾ ಪೂಜಾರಿ ವಂದಿಸಿದರು. ಪ್ರತಿಭಾ ಸ್ಪರ್ಧೆಯಲ್ಲಿ ಚಿಣ್ಣರಿಗೆ ಶ್ಲೋಕ ಪಠಣ, ಚರ್ಚಾ ಸ್ಪರ್ಧೆ, ಭಾವಗೀತೆ, ಜಾನಪದ ಗೀತೆ, ಏಕ ಪಾತ್ರಾಭಿನಯ ಹಾಗೂ ಪಾಲಕರಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಿರ್ಣಾಯಕರಾಗಿ ಭಾರತಿ ಹೆಗ್ಡೆ ನೆರೂಲ್‌, ಶುಭಾ ಶೆಟ್ಟಿ ಅವರು ಸಹಕರಿಸಿದರು. ಚಿಣ್ಣರು ತೀರ್ಪು ಗಾರರನ್ನು ಗೌರವಿಸಿದರು. ಭಾರತಿ ಹೆಗ್ಡೆ ಅವರು ಮಾತನಾಡಿ, ಚಿಣ್ಣರು ಒಳ್ಳೆಯ ಪ್ರತಿಭೆಯನ್ನು ಹೊಂದಿದ್ದಾರೆ. ಕೆಲವು ಹಾಡು ಮೈಸೂರು ದಸರಾದ ನೆನಪನ್ನು ತಂದುಕೊಟ್ಟಿದೆ ಎಂದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಂಜಿನಿಯರ್‌ ವಸಂತ ಕುಮಾರ್‌ ಶೆಟ್ಟಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳಿಗೆ ಎಳವೆಯಲ್ಲಿಯೇ ಕಷ್ಟ ಸಹಿಸಿಕೊಳ್ಳುವು ದನ್ನು ಕಲಿಸಬೇಕು. ಶ್ರಮ, ಛಲವಿಲ್ಲದೆ ಯಾವುದೇ ರೀತಿಯ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ಮಕ್ಕಳ ಪ್ರತಿಭೆ ನೋಡಿ ಆನಂದವಾಯಿತು. ಇದು ಮುಂಬಯಿಯಲ್ಲಿ ನಡೆಯುತ್ತಿ ದೆಯೇ ಎಂದು ಭಾಸ ವಾಗುತ್ತಿದೆ. ನಿಮ್ಮ ರೂವಾರಿಗಳು ಶ್ರೇಷ್ಠರು. ನನಗೊಂದು ಅಪರೂಪದ ಅವಕಾಶ ದೊರೆಯಿತು ಎಂದರು.

Advertisement

ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ, ಚಿಣ್ಣರ ಬಿಂಬದ ಸಲಹಾ ಸಮಿತಿಯ ಸದಸ್ಯ ಹರೀಶ್‌ ಶೆಟ್ಟಿ ಪಡುಬಿದ್ರೆ ಮಾತನಾಡಿ, ಚಿಣ್ಣರ ಬಿಂಬದ ತರಗತಿಗೆ ಮಕ್ಕಳು ಬಂದರೆ ಶಾಲಾ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಚಿಣ್ಣರ ಬಿಂಬದ ಮಕ್ಕಳು ಅಧಿಕ ಅಂಕಗಳನ್ನು ಪಡೆದು ಸಾಧಿಸಿ ತೋರಿಸಿದ್ದಾರೆ. ಎಲ್ಲದಕ್ಕೂ ಶ್ರಮ, ಛಲ, ನಿಷ್ಠೆ, ಶಿಸ್ತು ಅಗತ್ಯವಾಗಿದೆ. ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆಯನ್ನು ಮೆರೆಯಬೇಕು ಎಂದು ನುಡಿದರು.

ವಿಜೇತ ಮಕ್ಕಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ವಿಜೇತರ ಯಾದಿಯನ್ನು ಉದಯ ಶೆಟ್ಟಿ ವಾಚಿಸಿದರು. ಚಿಣ್ಣರ ಬಿಂಬದ ಅನಿರುದ್ಧ್ ಶೆಟ್ಟಿ, ಅನುಶ್ರೀ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸುಜಾತಾ ಶೆಟ್ಟಿ ಸ್ಪರ್ಧಿಗಳ ಹೆಸರು ವಾಚಿಸಿದರು. ಅನಂತ್‌ರಾಜ್‌ ಶೆಟ್ಟಿ ಹಾಗೂ ಪಾಲಕರನ್ನು ಗೌರವಿಸಲಾಯಿತು. ಅತ್ಯುತ್ತಮ ವಿದ್ಯಾರ್ಥಿಯಾಗಿ ದಿಶಾ ರವಿ ಶೆಟ್ಟಿ ಅವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು. ರವಿ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಅಶ್ವಿ‌ನಿ ಗೌಡ ಅವರು ಸಹಕರಿಸಿದರು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next