Advertisement

ಲಡಾಖ್‌ ಗಡಿಯುದ್ದಕ್ಕೂ ಡೇರೆ ಹೂಡಿದ ಚೀನ ಸೈನಿಕರು

02:28 AM May 21, 2020 | Hari Prasad |

ಹೊಸದಿಲ್ಲಿ: ಲಡಾಖ್‌ ಗಡಿಯಲ್ಲಿ ಚೀನವು ಹೆಚ್ಚುವರಿ ಸೈನಿಕರ ಜಮಾವಣೆ ಮಾಡಿರುವುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿದಂತೆ, ಉನ್ನತಾಧಿಕಾರಿಗಳ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ.

Advertisement

ಗಡಿಯಲ್ಲಿ ಡೇರೆ ಹೂಡಿರುವ ಚೀನ ಸೈನಿಕರ ಕ್ಷಣಕ್ಷಣದ ಮಾಹಿತಿಗಳನ್ನು ದೋವಲ್‌ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವಾರದಿಂದ ಚೀನ ಪಡೆ, ಈ ವಲಯದಲ್ಲಿ ಮಿಲಿಟರಿ ಶಸ್ತ್ರಾಭ್ಯಾಸ ಆರಂಭಿಸಿದೆ.

ಸಾಕಷ್ಟು ಯುದ್ಧೋಪಕರಣಗಳನ್ನೂ ಗಡಿ ಪ್ರದೇಶಕ್ಕೆ ಸಾಗಿಸಿದೆ. ಪ್ಯಾಂಗಾಂಗ್‌ ತ್ಸೋ ಸರೋವರದಂಥ ಸಣ್ಣ ಜಾಗದಲ್ಲೂ ಮೋಟಾರ್‌ ದೋಣಿಗಳಲ್ಲಿ ಗಸ್ತು ಆರಂಭಿಸಿದೆ.

ಗಲ್ವಾನ್‌ ದಡದಲ್ಲಿ 80 ಡೇರೆ: ಗಲ್ವಾನ್‌ ನದಿಪಾತ್ರದಲ್ಲಿ ಚೀನ ಸೈನಿಕರು 80 ಡೇರೆಗಳನ್ನು ಹೂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ, ನದಿ ಪಾತ್ರದಲ್ಲಿ ಸೈನಿಕರ ಟೆಂಟ್‌ ಹಾಕಿ, ಚೀನ ಸೇನೆಯ ಚಲನವಲನಗಳನ್ನು ಸಮೀಪದಿಂದ ವೀಕ್ಷಿಸುತ್ತಿದೆ.

1962ರಲ್ಲಿ ಇದೇ ವಿಚಾರಕ್ಕೆ ಚೀನ, ಭಾರತದ ಮೇಲೆ ಯುದ್ಧ ಸಾರಿತ್ತು. ಮತ್ತೆ ಚೀನಗೆ ಗಲ್ವಾನ್‌ ತೀರದ ಮೇಲೆ ಕಣ್ಣು ಬಿದ್ದಂತಿದೆ.

Advertisement

ಭಾರತದ ರಸ್ತೆ ಟಾರ್ಗೆಟ್‌: ಭಾರತ ಕಳೆದ ವರ್ಷವಷ್ಟೇ ನಿರ್ಮಿಸಿದ್ದ, 254 ಕಿ.ಮೀ. ದೂರದ ದೌಲತ್‌ ಬೇಗ್‌ ಓಲ್ಡಿ ರಸ್ತೆಯ ಸಂಪರ್ಕ ಕಡಿದು ಹಾಕಲು ಚೀನ ತಂತ್ರ ರೂಪಿಸುತ್ತಿದೆ.

ಈ ರಸ್ತೆ ನಿರ್ಮಾಣ ಆದಾಗಿನಿಂದಲೂ ಚೀನ, ತಂಟೆ ಮಾಡುತ್ತಲೇ ಬಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಭಾರತೀಯ ಸೈನಿಕರೂ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.

ನೇಪಾಲ ಪ್ರಧಾನಿಯಿಂದ ವಿವಾದಿತ ನಕ್ಷೆಗೆ ಸಮರ್ಥನೆ
ನೇಪಾಳ ಸಂಸತ್‌ ಅನುಮೋದಿಸಿರುವ ವಿವಾದಿತ ನಕ್ಷೆಯನ್ನು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸಮರ್ಥಿಸಿಕೊಂಡಿದ್ದಾರೆ.

‘ಪ್ರಧಾನಿ ಹುದ್ದೆಯಂಥ ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಲಿಪುಲೆಖ್‌, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶಗಳನ್ನು ನಕ್ಷೆಯಿಂದ ಕಣ್ಮರೆಯಾಗಲು ಬಿಡುವುದಿಲ್ಲ. ಇವುಗಳ ಮೇಲೆ ಹಕ್ಕು ಸ್ಥಾಪಿಸುವುದಕ್ಕಾಗಿ, ಸಂವಿಧಾನ ತಿದ್ದುಪಡಿ ಮಾಡಲಾಗುವುದು’ ಎಂದಿದ್ದಾರೆ.

ಭಾರತ ಸ್ಪಷ್ಟನೆ: ನೇಪಾಳ ತೆಗೆದಿರುವ ಈ ಹೊಸ ಕ್ಯಾತೆಗೆ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ‘ಲಿಪುಲೆಖ್‌, ಲಿಂಪಿಯಾಧುರಾ, ಕಾಲಾಪಾನಿ ಭಾರತಕ್ಕೆ ಸೇರಿದ ಭಾಗಗಳು. ಇವುಗಳ ಮೂಲಕವೇ ಮಾನಸ ಸರೋವರಕ್ಕೆ ರಸ್ತೆ ನಿರ್ಮಿಸಿದ್ದೇವೆ. ಯಾತ್ರಾರ್ಥಿಗಳೂ ಈ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ’ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next