ಚಿಕ್ಕಮಗಳೂರು: ಚೀನಾದ ವುಹಾನ್ ಪಟ್ಟಣದಲ್ಲಿ ಮೊದಲು ಕಾಣಿಸಿಕೊಂಡ
ಕೋವಿಡ್-19 ಎಂಬ ಮಹಾಮಾರಿ ಸೋಂಕು ಈಗ ವಿಶ್ವದಾದ್ಯಂತ ಸಂಚಲನ ಉಂಟುಮಾಡಿದೆ. ನಮ್ಮ ರಾಜ್ಯದಲ್ಲೂ ಸೋಂಕಿನ ಕಪಿಮುಷ್ಟಿ ಬಿಗಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಹೆಸರು ಕೇಳಿದರೆ ಜನರು ಭಯಭೀತರಾಗುತ್ತಿದ್ದಾರೆ. ಅಂಥದರಲ್ಲಿ ಚೀನಾದ ವ್ಯಕ್ತಿಯೇ ನಿಮ್ಮ ಎದುರಿಗೆ ಬಂದು ನಿಂತರೆ ಹೇಗಾಗಬೇಡ! ಇಂತಹ ಅನುಭವವಾಗಿದ್ದು ಕಾಫಿನಾಡು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಜನರಿಗೆ.
ಚೀನಾದಿಂದ ಭಾರತಕ್ಕೆ ಬಂದಿದ್ದ ಪುಂಗೀಮ್ ಎಂಬ ಪ್ರವಾಸಿಗ ಬುಧವಾರ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬಂದಿದ್ದರು. ಇವರು ಚೀನಾ ಮೂಲದವರೆಂದು ತಿಳಿದು ಹೆದರಿದ ಸ್ಥಳೀಯ ಲಾಡ್ಜ್ ಮಾಲೀಕರು ತಂಗಲು ಕೋಣೆ ಕೊಡದ ಪ್ರಸಂಗ ನಡೆಯಿತು.
ತಿಂಗಳ ಹಿಂದೆ ಚೀನಾದಿಂದ ಮಹಾರಾಷ್ಟ್ರದ ಮುಂಬಯಿಗೆ ಬಂದಿದ್ದ ಪುಂಗೀಮ್ ಬುಲೆಟ್ ಮೂಲಕ ಭಾರತ ಪ್ರವಾಸಕ್ಕೆ ಹೊರಟಿದ್ದರು. ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದ ಪುಂಗೀಮ್ ಬುಧವಾರ ರಾತ್ರಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬುಲೆಟ್ ಬೈಕ್ ನಲ್ಲಿ ಬಂದಿದ್ದರು. ತಡ ರಾತ್ರಿಯಾಗಿದ್ದ ಕಾರಣ ಕೊಟ್ಟಿಗೆಹಾರದಲ್ಲಿ ತಂಗಲು ನಿಶ್ಚಯಿಸಿ ಲಾಡ್ಜ್ ಗೆ ರೂಮ್ ಕೇಳಲು ಹೋಗಿದ್ದಾರೆ.
ಆದರೆ ಪುಂಗೀಮ್ ಅವರ ಚೀನಾದ ಐಡಿ ಕಾರ್ಡ್ ನೋಡಿ ದಂಗಾದ ಲಾಡ್ಜ್ ಮಾಲೀಕರು ರಾತ್ರಿ ತಂಗಲು ರೂಮ್ ನೀಡಲು ಹಿಂದೇಟು ಹಾಕಿದರು. ಕೋವಿಡ್-19 ವೈರಸ್ ಭೀತಿಯಿರುವ ಕಾರಣ ಸ್ಥಳದಲ್ಲಿದ್ದ ಸಾರ್ವಜನಿಕರು ಸಹ ಆತಂಕ ವ್ಯಕ್ತಪಡಿಸಿದರು.
ಆದರೆ ಪ್ರವಾಸಿ ಪುಂಗೀಮ್ ಮಹಾರಾಷ್ಟ್ರದಲ್ಲೇ ಕೋವಿಡ್ 19 ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿತ್ತು. ಹಾಗಾಗಿ ಪುಂಗೀಮ್ ಅದರ ದಾಖಲೆಯನ್ನು ತೋರಿಸಿದ ನಂತರ ಸಾರ್ವಜನಿಕರು ನಿರಾಳರಾದರು. ಆದರೆ ರಾತ್ರಿ ತಂಗಲು ರೂಮ್ ಸಿಗದ ಕಾರಣ ಪುಂಗೀಮ್ ತನ್ನಲ್ಲಿದ್ದ ಟೆಂಟ್ ನಲ್ಲೇ ಮಲಗಿದರು.
ಇಂದು ಮುಂಜಾನೆ ಪುಂಗೀಮ್ ಬೇಲೂರು ಮಾರ್ಗವಾಗಿ ಬೆಂಗಳೂರಿನ ಕಡೆಗೆ ಬುಲೆಟ್ ಪ್ರಯಾಣ ಮಾಡಿದರು. ಕೊಟ್ಟಿಗೆಹಾರದಿಂದ ಹೊರಡುವ ವೇಳೆ ಸಾರ್ವಜನಿಕರು ಚೀನಾ ಪ್ರವಾಸಿಗೆ ಮಾಸ್ಕ್ ನೀಡಿ ಬಿಳ್ಕೊಟ್ಟರು.
ಚೀನಾ ಪ್ರವಾಸಿ ಜಿಲ್ಲಾ ಪ್ರವಾಸಕ್ಕೆ ಬಂದಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದ್ದು, ಪ್ರವಾಸಿ ಪುಂಗೀಮ್ ತಪಾಸಣೆಗೊಳಗಾಗಿ ಕೊರೋನಾ ಮುಕ್ತರಾಗಿರುವ ಬಗ್ಗೆಯೂ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.