ವಾಷಿಂಗ್ಟನ್: ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಹೆಸರಿನ ಆ್ಯಪ್ ಮೂಲಕ ಅಲ್ಲಿನ ಕಮ್ಯುನಿಸ್ಟ್ ಸರಕಾರ, ತನ್ನದೇ ಜನರ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ವಿಚಾರ ಬಯಲಾಗಿದೆ. ಈ ಆ್ಯಪ್‌ನಲ್ಲಿ ಕ್ಸಿ ಅವರ ಭಾಷಣಗಳು, ಪ್ರವಾಸ ವಿಚಾರ, ಸರಕಾರದ ಕಾರ್ಯಕ್ರಮದ ಬಗ್ಗೆ ವಿವರಗಳು ಇರುತ್ತವೆ.
ಈ ಆ್ಯಪ್ ಅನ್ನು ಅಳವಡಿಸಿಕೊಂಡ ಬೆನ್ನಲ್ಲೇ, ಅದು ಜನರ ಮೊಬೈಲ್‌ನಲ್ಲಿರುವ ಫೋಟೋ ವಿವರ, ಕರೆ ವಿವರ ಪಡೆಯುತ್ತದೆ ಎಂದು ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿಯೊಂದರ ವರದಿ ಹೇಳಿದೆ.
ಸುಮಾರು 1 ಕೋಟಿ ಮಂದಿ ಕ್ಸುಕ್ಸಿ ಹೆಸರಿನ ಈ ಆ್ಯಪ್ ಅನ್ನು ಚೀನದಲ್ಲಿ ಅಳವಡಿಸಿಕೊಂಡಿದ್ದಾರೆ. ಆ್ಯಪಲ್, ಆ್ಯಂಡ್ರಾಯಿಡ್ ಫೋನ್‌ಗಳಿಗೆ ಇದು ಲಭ್ಯವಿದೆ. ಆ್ಯಪ್ ಬಿಡುಗಡೆಯಾದ ಬೆನ್ನಲ್ಲೇ ಹಲವಾರು ಮಂದಿ ಇದನ್ನು ಅಳವಡಿಸಿಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಚೀನದಲ್ಲಿ ಸೈಬರ್ ಕಾನೂನು ಜಾರಿಗೆ ಬಂದಿದ್ದು, ಅಲ್ಲಿನ ಸರಕಾರ ಕೇಳಿದರೆ ಕೂಡಲೇ ಕಂಪೆನಿಗಳು ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಈ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಗ್ರಾಹಕರು ನಿತ್ಯವೂ ಏನು ಮಾಡಿದ್ದಾರೆ, ಎಷ್ಟು ಫೋಟೋ ತೆಗೆದಿದ್ದಾರೆ, ಎಲ್ಲಿಗೆಲ್ಲ ಕರೆ ಮಾಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಬಹುದು. ಜತೆಗೆ ಇಂತಹ ಮಾಹಿತಿಯನ್ನು ನಿತ್ಯವೂ ಆ್ಯಪ್ ಕಳಿಸುತ್ತಿರುತ್ತದೆ. ಈ ಹಿಂಬಾಗಿಲ ವ್ಯವಹಾರವನ್ನು ಅಲ್ಲಿನ ಸರಕಾರ ನಿರಾತಂಕವಾಗಿ ಮಾಡುತ್ತಿದೆ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.