ಜಮ್ಮು-ಕಾಶ್ಮೀರ: ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನ ಗುರುಂಗ್ ಪರ್ವತ ಪ್ರದೇಶದ ಸಮೀಪ ಚೀನಾ ಸೈನಿಕನೊಬ್ಬನನ್ನು ಭಾರತೀಯ ಸೇನೆ ಶುಕ್ರವಾರ(ಜನವರಿ 08, 2021) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಲಭ್ಯ ಮಾಹಿತಿಯ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್ ಎ)ಯ ಯೋಧ ದಾರಿ ತಪ್ಪಿ, ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ. ವಾಸ್ತವ ಗಡಿ ನಿಯಂತ್ರಣ (ಎಲ್ ಎಸಿ) ರೇಖೆಯಿಂದ ಪಿಎಲ್ ಎ ಯೋಧ ಯಾವ ಕಾರಣಕ್ಕಾಗಿ ಪ್ರವೇಶಿಸಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಿದ ನಂತರ ಶನಿವಾರ(ಜ.09) ಅಥವಾ ಭಾನುವಾರ ವಾಪಸ್ ಕಳುಹಿಸುವುದಾಗಿ ಸೇನಾ ಮೂಲಗಳು ಹೇಳಿವೆ.
ಭಾರತೀಯ ಸೇನೆಯ ಅಧಿಕೃತ ಪ್ರಕಟಣೆಯಲ್ಲಿ, ಶುಕ್ರವಾರ ಮುಂಜಾನೆ ಭಾರತದ ಪ್ರದೇಶದಲ್ಲಿ ಚೀನಾ ಸೈನಿಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚೀನಾ ಯೋಧ ಸೇನೆಯ ಕಸ್ಟಡಿಯಲ್ಲಿದ್ದು, ಕಾಯ್ದೆಯಂತೆ ಚೀನಾ ಯೋಧ ತನಿಖೆಗೆ ಸಹಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಾಕಿಸ್ತಾನ: ಇಬ್ಬರು ಹಿಂದು ಯುವತಿಯರ ಅಪಹರಣ, ಬಲವಂತದಿಂದ ಇಸ್ಲಾಂಗೆ ಮತಾಂತರ
2020ರ ಅಕ್ಟೋಬರ್ ನಲ್ಲಿ ಭಾರತೀಯ ಸೇನೆ ಲಡಾಖ್ ನ ಡೆಮ್ ಚೋಕ್ ಪ್ರದೇಶದ ಸಮೀಪ ಚೀನಾ ಸೈನಿಕ ವಾಂಗ್ ಯಾ ಲಾಂಗ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿತ್ತು. ವಿಚಾರಣೆಗೆ ಒಳಪಡಿಸಿದ ನಂತರ ಅಕ್ಟೋಬರ್ 21ರಂದು ವಾಂಗ್ ನನ್ನು ವಾಪಸ್ ಕಳುಹಿಸಲಾಗಿತ್ತು.