ನವದೆಹಲಿ: ಕೋವಿಡ್-19 ವಿಷಯಕ್ಕೆ ಸಂಬಂಧಪಟ್ಟಂತೆ ನೆರೆಹೊರೆಯ ರಾಷ್ಟ್ರಗಳ ಕೆಂಗಣಿಗೆ ಗುರಿಯಾಗಿರುವ ಚೀನ ಭಾರತದ ವಿರುದ್ಧ ಪಿತೂರಿ ಮಾಡುತ್ತಲೇ ಇದೆ.
ತನ್ನ ಹೀನ ಬುದ್ಧಿ ಗಡಿ ಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿರುವ ಡ್ರ್ಯಾಗನ್ ದೇಶ ಮತ್ತೇ ತನ್ನ ಕಪಟ ಬುದ್ಧಿ ಪ್ರದರ್ಶನ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಮತ್ತು ಗಾಲ್ವಾನ್ ಗಡಿ ಬಗೆಗಿನ ಭಾರತದ ಅಧಿಕೃತ ಹೇಳಿಕೆಗಳನ್ನು ತೆಗೆದುಹಾಕಿದೆ.
ಸರಕಾರದ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್‌ಗೆ ಹೆಸರುವಾಸಿಯಾದ ಚೀನದ ಸಾಮಾಜಿಕ ಮಾಧ್ಯಮ ಈ ಒಂದು ಕೆಲಸ ಮಾಡುತ್ತಿದ್ದು, ಪ್ರಧಾನಿ ಮಾತನಾಡಿದ ಅಧಿಕೃತ ವಿಡೀಯೋಗಳನ್ನು ಡಿಲೀಟ್ ಮಾಡುತ್ತಿದೆ.
ಚೀನ ಸೆನ್ಸಾರ್ ಶಿಪ್ ಜೂನ್ 18ರಂದು ದೇಶದ ಗಡಿ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಹಂಚಿಕೊಂಡಿದ್ದ ಹೇಳಿಕೆಗಳನ್ನು ವೀಚಾಟ್‌ನಲ್ಲಿ ಬಳಕೆದಾರರಿಗೆ ಸಿಗದಂತೆ ಮಾಡಿದ್ದು, ಈ ಮೂಲಕ ಮೋದಿಯ ಭಾಷಣದ ವಿಡಿಯೋಗಳನ್ನು ತೆಗೆದು ಹಾಕುತ್ತಿದೆ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನ- ಭಾರತ ರಕ್ತಸಿಕ್ತ ಮುಖಾಮುಖಿಯಾದ ನಂತರ ಪ್ರಧಾನಿ ಅವರು ತಮ್ಮ ನಿಲುವನ್ನು ಹಂಚಿಕೊಂಡಿದ್ದು, ಭಾರತವು ಶಾಂತಿ ಬಯಸುತ್ತದೆಯಾದರೂ ಪ್ರಚೋದಿಸಿದಾಗ ದೇಶವು ಸೂಕ್ತವಾದ ಉತ್ತರ ನೀಡಲು ಸಮರ್ಥವಾಗಿದೆ ಎಂದು ಮೋದಿ ಒತ್ತಿ ಹೇಳಿದ್ದರು.
ಆದರೆ ಮೋದಿ ಅವರ ಈ ಹೇಳಿಕೆಗಳು ಸೇರಿದಂತೆ ಗಡಿ ಭಾಗದ ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಅವರ ಹೇಳಿಕೆಯನ್ನು ಅಧಿಕೃತ ವೀಚಾಟ್ ಖಾತೆಯಿಂದ ಚೀನ ಸೆನ್ಸಾರ್ ಶಿಪ್ ತೆಗೆದುಹಾಕಿದ್ದು, ವೀಚಾಟ್‌ನಲ್ಲಿನ ಈ ಸಂದೇಶವು ನಿಯಮಗಳನ್ನು ಉಲ್ಲಂಘಿಸುವ ಕಾರಣ ಅದನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.