ನವದೆಹಲಿ:ಜಗತ್ತಿನಲ್ಲಿ ಮೊಬೈಲ್ ಮಾರಾಟಕ್ಕೆ ಭಾರತ ಎರಡನೇ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಕಡಿಮೆ ಬೆಲೆಗೆ ಉತ್ತಮ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಚೀನಾ ತಯಾರಿಸುವ ಮೂಲಕ ಭಾರತದಲ್ಲಿ ಭರ್ಜರಿ ಪಾರುಪತ್ಯ ಸಾಧಿಸಿದೆ ಎಂದು ವರದಿ ತಿಳಿಸಿದೆ.
ಎಕಾನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, 2018ರ ಸಾಲಿನಲ್ಲಿ ಚೀನಾದ ಕ್ಸಿಯೋಮಿ, ಒಪ್ಪೋ, ವಿವೋ ಹಾಗೂ ಹೋನೊರ್ ಸ್ಮಾರ್ಟ್ ಗಳನ್ನು ಖರೀದಿಸಲು ಭಾರತೀಯರು ವ್ಯಯಿಸಿದ ಹಣ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ!
ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಗಳನ್ನು ಚೀನಾ ಪರಿಚಯಿಸಿದ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಚೀನಾ ಮೊಬೈಲ್ ಮಾರಾಟಕ್ಕೆ ಕಾರಣವಾಗಿದೆ. ವಿಶ್ಲೇಷಕರ ಪ್ರಕಾರ, ಇದೇ ರೀತಿ ಆಕರ್ಷಣೆ ಮುಂದಿನ ಕೆಲವು ವರ್ಷಗಳವರೆಗೆ ಮುಂದುವರಿಯಲಿದ್ದು, ಈಗಾಗಲೇ ಭಾರತದಲ್ಲಿ ಚೀನಾ ನಿರ್ಮಾಣದ ಕ್ಸಿಯೋಮಿ, ಒಪ್ಪೋ, ವಿವೋ, ಲೆನೋವೊ, ಮೋಟೋರೋಲಾ ಮತ್ತು ಒನ್ ಪ್ಲಸ್ ನಂತಹ ಸ್ಮಾರ್ಟ್ ಫೋನ್ ಗಳು ಭರ್ಜರಿ ಮಾರಾಟ ಕಂಡಿರುವುದಾಗಿ ವರದಿ ವಿವರಿಸಿದೆ.
ಮೇಕ್ ಇನ್ ಇಂಡಿಯಾದಡಿ ಚೀನಾದ ಹೂಡಿಕೆದಾರರನ್ನು ಸೆಳೆಯಲು ಭಾರತ ಮಾತುಕತೆ ನಡೆಸಿದ್ದು, ಈ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವುದಾಗಿತ್ತು. ವಿವೋ ಮೊಬೈಲ್ ಉತ್ಪಾದನಾ ಘಟಕದಲ್ಲಿ 5 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಅದೇ ರೀತಿ ನೋಯ್ಡಾ ಮತ್ತು ಉತ್ತರಪ್ರದೇಶದಲ್ಲಿ ಒಪ್ಪೋ ಮೊಬೈಲ್ ಉತ್ಪಾದನಾ ಘಟಕ ನಿರ್ಮಿಸುವ ಸಿದ್ಧತೆಯಲ್ಲಿದೆ.
2017ರ ಸಾಲಿನಲ್ಲಿ ಚೀನಾ ನಾಲ್ಕು ಕಂಪನಿಯ ಸ್ಮಾರ್ಟ್ ಫೋನ್ ಗಳ ಮಾರಾಟದ ಮೂಲಕ ಭಾರತದಲ್ಲಿ 26,262.4 ಕೋಟಿ ರೂಪಾಯಿ ವಹಿವಾಟು ನಡೆಸಿದ್ದರೆ, 2018ರ ಸಾಲಿನಲ್ಲಿ 51,722.1 ಕೋಟಿ ವಹಿವಾಟು ನಡೆಸಿದೆ ಎಂದು ವರದಿ ತಿಳಿಸಿದೆ.