ಬೀಜಿಂಗ್: ಮರೆಗುಳಿ ಕಾಯಿಲೆ, ಮಧು ಮೇಹ, ಕ್ಯಾನ್ಸರ್ ಹಾಗೂ ನರ ಸಂಬಂಧಿ ರೋಗಗಳ ಕರಾರುವಾಕ್ ಅಧ್ಯಯನಕ್ಕಾಗಿ ಹಾಗೂ ನಿವಾರಣಾ ಮಾರ್ಗಗಳನ್ನು ಹುಡುಕುವ ಕಾರಣಕ್ಕಾಗಿ, ಚೀನದಲ್ಲಿ ಕ್ಲೋನಿಂಗ್ ಮೂಲಕ ಐದು ಕೋತಿಗಳನ್ನು ಸೃಷ್ಟಿಸಲಾಗಿದೆ.
ನಿದ್ರಾಹೀನತೆ ರೋಗ (ಸರ್ಕಾಡಿಯನ್ ರಿದಮ್ ಡಿಸಾರ್ಡರ್) ಹಾಗೂ ಮರೆಗುಳಿ (ಅಲೆj„ಮರ್) ಕಾಯಿಲೆಗೆ ಒಳಗಾಗಿದ್ದ ಮುಸಿಯ ಜಾತಿಯ ಕೋತಿಯೊಂದರಿಂದ ಪಡೆಯಲಾದ ವಂಶವಾಹಿಗಳಿಂದ ಐದು ಕೋತಿಗಳನ್ನು ಮರು ಸೃಷ್ಟಿಸಲಾಗಿದ್ದು, ಈ ಕೋತಿಗಳಲ್ಲಿ ಕಾಯಿಲೆ ಅಭಿವೃದ್ಧಿಯಾಗುವ ರೀತಿ, ಅವನ್ನು ನಿಗ್ರಹಿಸಬಹುದಾದ ಆಧುನಿಕ ವಿಧಾನ ಮುಂತಾದ ಸಂಶೋಧನೆಗಳನ್ನು ನಡೆಸಲಾಗುವುದು ಎಂದು ಚೀನ ವಿಜ್ಞಾನಿಗಳು ತಿಳಿಸಿದ್ದಾರೆ.
ಶಾಂಘೈನ “ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಆಫ್ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್’ನ ಲ್ಯಾಬೋರೇಟರಿಯಲ್ಲಿ ಈ ಕೋತಿಗಳ ಮರು ಸೃಷ್ಟಿ ಮಾಡಲಾಗಿದೆ ಎಂದು ನ್ಯಾಷನಲ್ ಸೈನ್ಸ್ ರಿವ್ಯೂ ನಿಯತಕಾಲಿಕೆಯಲ್ಲಿ ವಿಜ್ಞಾನಿಗಳು ಪ್ರಕಟಿಸಿದ್ದಾರೆ. ಕೇವಲ ಮರೆಗುಳಿ ಕಾಯಿಲೆ, ಮಧುಮೇಹ, ಕ್ಯಾನ್ಸರ್ ಮಾತ್ರವಲ್ಲದೆ ನಿದ್ರಾ ಹೀನತೆ, ಮಾನಸಿಕ ಖನ್ನತೆಯಂಥ ಸಮಸ್ಯೆಗಳ ಮೇಲೂ ಸಂಶೋಧನೆ ನಡೆಸಲಾಗುತ್ತದೆ ಎಂದಿರುವ ಅವರು, ಸಂಶೋಧನೆ ಯಶಸ್ವಿಯಾದರೆ, ಮನುಕುಲಕ್ಕೆ ವರದಾನವಾಗಬಹುದಾದಂಥ ಚಿಕಿತ್ಸೆಗಳು ಲಭ್ಯವಾಗುತ್ತವೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಶಾಂಘೈನ ಪ್ರಯೋಗಾಲಯವೊಂದರಲ್ಲಿ ಕೋತಿಗಳನ್ನು ಸೃಷ್ಟಿಸಿರುವುದಾಗಿ ಘೋಷಣೆ
ಮರೆಗುಳಿ ಕಾಯಿಲೆ, ಮಧುಮೇಹ, ಕ್ಯಾನ್ಸರ್‌ನಂಥ ರೋಗಗಳ ಸಂಶೋಧನೆಗಾಗಿ ಈ ಪ್ರಯತ್ನ
ಮುಸಿಯ ಜಾತಿಯ ಕೋತಿಯಿಂದ ಐದು ಕೋತಿಗಳ ಪ್ರತಿ ಸೃಷ್ಟಿ