ಬೀಜಿಂಗ್: ಯುದ್ಧಕ್ಕೆ ಸನ್ನದ್ಧರಾಗಿರುವಂತೆ ತನ್ನ ಪೀಪಲ್ಸ್ ಲಿಬರೇಷನ್ ಅರ್ಮಿ(ಪಿಎಲ್‌ಎ)ಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚಿಸಿದ್ದಾರೆ.
ಈ ಮೂಲಕ ತೈವಾನ್ ವಿರುದ್ಧ ಸಂಭವನೀಯ ದಾಳಿಗೆ ಅವರು ಮುನ್ಸೂಚನೆ ನೀಡಿದ್ದಾರೆ. ಆದರೆ ನಿಜವಾಗಿಯೂ ಯುದ್ಧ ನಡೆಯಲಿದೆಯೋ ಅಥವಾ ಎಂದಿನಂತೆ ಕೇವಲ ಎಚ್ಚರಿಕೆಯೋ ಎಂಬುದು ಕಾದು ನೋಡಬೇಕಿದೆ.
ಚೀನದ ಕೇಂದ್ರೀಯ ಸೇನಾ ಆಯೋಗ (ಸಿಎಂಸಿ)ದ ಜಂಟಿ ಕಾರ್ಯಾಚರಣೆ ಕಮಾಂಡ್ ಸೆಂಟರ್‌ಗೆ ಮಂಗಳವಾರ ಭೇಟಿ ನೀಡಿ ನಂತರ ಮಾತನಾಡಿದ ಜಿನ್‌ಪಿಂಗ್, “ಚೀನದ ರಾಷ್ಟ್ರೀಯ ಭದ್ರತೆ ಅಸ್ತಿರತೆಯನ್ನು ಎದುರಿಸುತ್ತಿದೆ.
ಯುದ್ಧದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತು ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು ಪಿಎಲ್‌ಎ ತನ್ನ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಳ್ಳಬೇಕು,’ ಎಂದು ಹೇಳಿದರು.
“ಯುದ್ಧಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಪಿಎಲ್‌ಎ ಮಾಡಿಕೊಳ್ಳಬೇಕು. ಇದಕ್ಕೆ ಬೇಕಿರುವ ಎಲ್ಲಾ ಸಹಕಾರವನ್ನು ಸರ್ಕಾರ ನೀಡಲಿದೆ. ಯುದ್ಧಗಳನ್ನು ಗೆಲ್ಲುವ ನಿಟ್ಟಿನಲ್ಲಿ ತನ್ನ ಸಾಮರ್ಥ್ಯವನ್ನು ಪಿಎಲ್‌ಎ ಹೆಚ್ಚಿಸಿಕೊಳ್ಳಬೇಕು,’ ಎಂದು ಚೀನ ಮಿಲಿಟರಿಯ ಮುಖ್ಯಸ್ಥರು ಕೂಡ ಆಗಿರುವ ಜಿನ್‌ಪಿಂಗ್ ಹೇಳಿದರು.
ಕಳೆದ ತಿಂಗಳು ನಡೆದ ಚೀನ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ರಾಷ್ಟ್ರೀಯ ಸಮಾವೇಶದಲ್ಲೂ ತೈವಾನ್ ಕುರಿತು ಕ್ಸಿ ಜಿನ್‌ಪಿಂಗ್ ಪ್ರಸ್ತಾಪಿಸಿದ್ದರು. “ಅಗತ್ಯಬಿದ್ದರೆ ಬಲ ಪ್ರಯೋಗಿಸಿ ತೈವಾನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಲಾಗುವುದು,’ ಎಂದು ತಮ್ಮ ಭಾಷಣದಲ್ಲಿ ಚೀನಾ ಅಧ್ಯಕ್ಷರು ಹೇಳಿದ್ದರು.