Advertisement

ಚೀನದ ವಿವೋದೊಂದಿಗೆ IPL‌ ಸಂಬಂಧ ಖತಂ ; ಬೈಜೂಸ್‌ ಅಥವಾ ಕೋಕಾಕೋಲ ಪ್ರಾಯೋಜಕತ್ವಕ್ಕೆ ಪ್ರಯತ್ನ

02:57 AM Aug 07, 2020 | Hari Prasad |

ಹೊಸದಿಲ್ಲಿ: ಚೀನ ಮೊಬೈಲ್‌ ಕಂಪೆನಿ ವಿವೋದೊಂದಿಗಿನ ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದವನ್ನು ಕಡಿದುಕೊಂಡಿರುವುದಾಗಿ ಬಿಸಿಸಿಐ ಗುರುವಾರ ಅಧಿಕೃತವಾಗಿ ಪ್ರಕ ಟಿಸಿದೆ.

Advertisement

ಆದರೆ ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

2018ರಿಂದ 2022ರ ವರೆಗೆ 5 ವರ್ಷಗಳ ಕಾಲ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿರುವ ವಿವೋವನ್ನೇ ಈ ಬಾರಿಯೂ ಉಳಿಸಿಕೊಳ್ಳುವುದಾಗಿ ಬಿಸಿಸಿಐ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸ್ವದೇಶಿ ಜಾಗರಣ್‌ ಮಂಚ್‌ ವಿರೋಧ ವ್ಯಕ್ತಪಡಿಸಿತು. ಕೂಡಲೇ ವಿವೋ ಪರಸ್ಪರ ಮಾತುಕತೆ ಮೂಲಕ ಒಪ್ಪಂದದಿಂದ ಹಿಂದೆ ಸರಿಯಿತು.

ಎರಡು ದಿನಗಳಲ್ಲಿ ಈ ಬಾರಿಯ ಐಪಿಎಲ್‌ ಶೀರ್ಷಿಕೆ ಪ್ರಾಯೋ ಜಕತ್ವಕ್ಕಾಗಿ ಬಿಸಿಸಿಐ ಟೆಂಡರ್‌ ಕರೆಯಲಿದೆ. ಈಗಾಗಲೇ ಕೆಲವು ಭಾರತೀಯ ಕಂಪೆನಿಗಳು ಈ ಅವಕಾಶ ಪಡೆಯಲು ಮುಂದಾಗಿವೆ ಎಂದು ಮೂಲಗಳು ಹೇಳಿವೆ. ಬೈಜೂಸ್‌ ಮತ್ತು ಕೋಕಾಕೋಲ ಮುಂಚೂಣಿಯಲ್ಲಿವೆ ಎಂದು ತಿಳಿದು ಬಂದಿದೆ.

5 ವರ್ಷಗಳ ಒಪ್ಪಂದ
2018ರಲ್ಲಿ ವಿವೋ ಕಂಪೆನಿ, ಬಿಸಿಸಿಐನೊಂದಿಗೆ 5 ವರ್ಷಗಳ ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 2,199 ಕೋಟಿ ರೂ. ಮೊತ್ತದ ಒಪ್ಪಂದವದು. ವಾರ್ಷಿಕವಾಗಿ 440 ಕೋಟಿ ರೂ. ಕೊಡಲು ಅದು ಒಪ್ಪಿಕೊಂಡಿತ್ತು. ಈಗ ವಿವೋ ಗೈರಿನಿಂದ ಬಿಸಿಸಿಐಗೆ ಹೊಸ ಪ್ರಾಯೋಜಕರು ಸಿಗಬಹುದು. ಆದರೆ ನಿರೀಕ್ಷಿಸಿದಷ್ಟು ಹಣ ಸಿಗುವುದು ಕಷ್ಟ.

Advertisement

ಜಾಗರಣ್‌ ಮಂಚ್‌ ಸ್ವಾಗತ
ಬಿಸಿಸಿಐ ನಿರ್ಧಾರವನ್ನು ಸ್ವದೇಶಿ ಜಾಗರಣ್‌ ಮಂಚ್‌ ಸಹ ಸಂಘಟನಾ ಕಾರ್ಯದರ್ಶಿ ಅಶ್ವಾನಿ ಮಹಾಜನ್‌ ಸ್ವಾಗತಿಸಿದ್ದಾರೆ. ಈ ವರ್ಷ ಮಾತ್ರವಲ್ಲ, ಮುಂಬರುವ ವರ್ಷಗಳಲ್ಲೂ ವಿವೋವನ್ನು ಮುಂದುವರಿಸಬಾರದು ಎಂದಿದ್ದಾರೆ. ವಿವೋವನ್ನು ಉಳಿಸಿಕೊಳ್ಳುವುದಾಗಿ ಬಿಸಿಸಿಐ ಘೋಷಿಸಿದ್ದಾಗ, ಮೊದಲು ವಿರೋಧಿಸಿದ್ದೇ ಸ್ವದೇಶಿ ಜಾಗರಣ್‌ ಮಂಚ್‌.

20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾಗಿದ್ದರೂ, ಚೀನದ ಕಂಪೆನಿಯೊಂದಿಗೆ ಬಿಸಿಸಿಐ ಬಾಂಧವ್ಯ ಮುಂದುವರಿಸಲು ಹೊರಟಿರುವುದು ಅಕ್ಷಮ್ಯ. ಐಪಿಎಲ್‌ ಪಂದ್ಯಾವಳಿಯನ್ನು ಬಹಿಷ್ಕರಿಸಬೇಕು ಎಂದು ಜಾಗರಣ್‌ ಮಂಚ್‌ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next