ಸ್ಯಾನ್ ಫ್ರಾನ್ಸಿಸ್ಕೋ : 2011ರಲ್ಲಿ 17ರ ಹರೆಯದವನಿದ್ದಾಗ ಆ್ಯಪಲ್ ಐಪ್ಯಾಡ್ ಮತ್ತು ಐಫೋನ್ ಖರೀದಿಸಲು ಶಸ್ತ್ರ ಚಿಕಿತ್ಸೆ ಮೂಲಕ ತನ್ನ ಒಂದು ಕಿಡ್ನಿಯನ್ನು ಮಾರಿದ್ದ ಚೀನ ವ್ಯಕ್ತಿ ವಾಂಗ್ ಶಾಂಕುನ್ ಇದೀಗ ಬಹು ಅಂಗಾಂಗ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದಾನೆ.
ಕಿಡ್ನಿ ತೆಗೆಯುವ ಅಕ್ರಮ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದ ಶಾಂಕುನ್ ಸ್ವಲ್ಪವೇ ಸಮಯದಲ್ಲಿ ಇನ್ನೊಂದು ಕಿಡ್ನಿಯ ಕಾರ್ಯಕ್ಷಮತೆಯ ಕುಸಿತಕ್ಕೆ ಗುರಿಯಾಗಿದ್ದ ಎಂದು ನ್ಯೂಸ್ ಡಾಟ್ ಕಾಮ್ ಎಯು ವರದಿ ಮಾಡಿದೆ.
ಶಾಂಕುನ್ 2011ರ ಎಪ್ರಿಲ್‌ನಲ್ಲಿ ಕಾಳಸಂತೆಯಲ್ಲಿ ಅಕ್ರಮ ಅಂಗಾಂಗ ಖರೀದಿ ಧಂದೆ ನಡೆಸುತ್ತಿದ್ದವರಿಗೆ ತನ್ನ ಒಂದು ಕಿಡ್ನಿಯನ್ನು 4,500 ಆಸ್ಟ್ರೇಲಿಯನ್ ಡಾಲರ್‌ಗೆ ಮಾರಿದ್ದ. ಆ ಹಣದಿಂದ ಆತ ಐಫೋನ್-4 ಮತ್ತು ಐಪ್ಯಾಡ್-2 ಖರೀದಿಸಿದ್ದ.
ಆದರೆ ಅದಾಗಿ ಸ್ವಲ್ಪವೇ ಸಮಯದೊಳಗೆ ಆತನ ಎರಡನೇ ಕಿಡ್ನಿಯ ಕಾರ್ಯ ಕ್ಷಮತೆ ಕುಗ್ಗುತ್ತಾ ಹೋಯಿತು. ಶಸ್ತ್ರ ಚಿಕಿತ್ಸೆ ನಡೆದ ಸ್ಥಳದಲ್ಲಿನ ಅಶೌಚ ಸ್ಥಿತಿಗತಿಯೇ ಈ ದುರವಸ್ಥೆಗೆ ಕಾರಣವಾಗಿತ್ತು ಎನ್ನಲಾಗಿದೆ.
2012ರಲ್ಲಿ ಅಕ್ರಮ ಅಂಗಾಂಗ ಮಾರಾಟ ಧಂದೆಯಲ್ಲಿ ಶಾಮೀಲಾಗಿದ್ದ 9 ಮಂದಿಯನ್ನು ಜೈಲಿಗೆ ಹಾಕಲಾಗಿತ್ತು. ಕಾನೂನಿನ ಪ್ರಕಾರ ದೋಷಿಗಳೆಂದು ಪರಿಗಣಿಸಲ್ಪಟ್ಟವರಲ್ಲಿ ಐವರು ಸರ್ಜನ್ ಗಳು ಕೂಡ ಸೇರಿದ್ದರು ಎಂದು ಐಎಎನ್‌ಎಸ್ ವರದಿ ಮಾಡಿದೆ.