ಅರುಣಾಚಲಪ್ರದೇಶ ; ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ 17 ವರ್ಷದ ಬಾಲಕನನ್ನು ಚೀನಾ ಲಿಬರೇಷನ್ ಆರ್ಮಿಯ ಸೈನಿಕರು ಅಪಹರಣ ಮಾಡಿರುವುದು ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಇದೊಂದು ದುರ್ದೈವಕರ ಸಂಗತಿ ಎಂದು ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅರುಣಾಚಲದ ಪ್ರದೇಶ ಪಾಸಿಘಾಟ್ (ಪಶ್ಚಿಮ) ಕ್ಷೇತ್ರ ವ್ಯಾಪ್ತಿಗೆ ಸೇರಿದ ಮಿರಾಮ್ ತರೂನ್ ಎಂಬ ಬಾಲಕನನ್ನು ಚೀನಾ ಸೈನಿಕರು ಜಿಡೋ ಎಂಬಲ್ಲಿಂದ ಅಪಹರಿಸಿದ್ದಾರೆ. ಇದು ಲುಂಗ್ಟಾ ಜಾರ್ ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಇರಿಂಗ್ ಭಾರತದ ಗಡಿ ಪ್ರದೇಶದೊಳಗೆ ಚೀನಾ ನಿರಂತರ ಅತಿಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಾಲಕನ ಅಪಹರಣ ಕೃತ್ಯವನ್ನು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದಾರೆ. ಅಪಹರಣ ನಡೆದ ಸ್ಥಳ ತ್ಸಾಂಗಪೋ ನದಿ ಅರುಣಾಚಲ ಪ್ರದೇಶ ಹಾಗೂ ಆಸ್ಸಾಂ ಗಡಿಯಲ್ಲಿ ಸಂಧಿಸುವ ಸಿಯಾಂಗ್ ಸಮೀಪ ಇದೆ. ತ್ಸಾಂಗಪೋವನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಎಂದೂ ಆಸ್ಸಾಂನಲ್ಲಿ ಬ್ರಹ್ಮಪುತ್ರ ಎಂದೂ ಕರೆಯಲಾಗುತ್ತದೆ.
ಈ ಘಟನೆ ಬಗ್ಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವ ಭಾರತದ ಭಾಗ್ಯ ವಿಧಾತನೊಬ್ಬನ್ನು ಚೀನಾ ಅಪಹರಿಸಿದೆ. ನಾವು ಅಪಹೃತ ಬಾಲಕನ ಕುಟುಂಬದ ಜತೆಗಿದ್ದೇವೆ ಎಂದು ಹೇಳುವುದರ ಜತೆಗೆ ಪ್ರಧಾನಿ ಮೌನವನ್ನು ಖಂಡಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಸಂಸದ ಟಾಪಿರ್ ಗಾವೋ , ಕೇಂದ್ರ ರಕ್ಷಣಾ ಸಚಿವರು, ಗೃಹ ಇಲಾಖೆ ಹಾಗೂ ಪ್ರಧಾನಿ ಕಾರ್ಯಾಲಯವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಇಲಾಖೆ ಅಧಿಕಾರಿಗಳು ಬಾಲಕನ ಬಿಡುಗಡೆ ಪ್ರಯತ್ನ ಆರಂಭಿಸಿದ್ದಾರೆ. ಈ ಭಾಗದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಚೀನಾ ಉಪಟಳ ನಡೆಸುವುದು ಇದೇ ಮೊದಲಲ್ಲ. 2020ಲ್ಲಿ ಐವರು ಗುಡ್ಡಗಾಡು ಬಾಲಕರನ್ನು ಅಪಹರಿಸಿದ್ದ ಚೀನಾ ಸೇನೆ ಒಂದು ವಾರದ ಬಳಿಕ ಬಿಟ್ಟುಕಳುಹಿಸಿತ್ತು.