Advertisement

ಚೀನಿ ಆ್ಯಪ್‌ಗಳ ನಿಷೇಧ ಸ್ಪಷ್ಟ ಸಂದೇಶ

03:00 AM Jul 01, 2020 | Hari Prasad |

ಭಾರತ ಮತ್ತು ಚೀನ ನಡುವೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ವೇಳೆಯಲ್ಲೇ ಭಾರತವು ಚೀನಕ್ಕೆ ಸ್ಪಷ್ಟ ಸಂದೇಶ ಕಳುಹಿಸಲಾರಂಭಿಸಿದೆ.

Advertisement

ಈಗ ದೇಶವು ಚೀನದ 59 ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.

ಇಂಥದ್ದೊಂದು ದಿಟ್ಟ ಹೆಜ್ಜೆ ಅತ್ಯಗತ್ಯವಾಗಿತ್ತು ಎನ್ನುವುದು ನಿರ್ವಿವಾದ. ಚೀನ ಒಂದೆಡೆಯಿಂದ ಭಾರತಕ್ಕೆ ಗಡಿಭಾಗದಲ್ಲಿ ತೊಂದರೆಯುಂಟುಮಾಡುತ್ತಲೇ ಇನ್ನೊಂದೆಡೆಯಿಂದ ತನ್ನ ಆರ್ಥಿಕ ಬಾಹುಗಳನ್ನು ಭಾರತಾದ್ಯಂತ ಚಾಚಿದೆ.

ಇಂದು ದೇಶದಲ್ಲಿ ಪ್ಲಾಸ್ಟಿಕ್‌ ಸಾಮಗ್ರಿಗಳಿಂದ ಹಿಡಿದು ಆ್ಯಪ್‌ಗಳವರೆಗೆ ಮೊಬೈಲ್‌ ಫೋನುಗಳಿಂದ ಹಿಡಿದು ಔಷಧ ವಲಯದವರೆಗೆ ಚೀನ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದೆ. ಯಾವ ಮಟ್ಟಕ್ಕೆಂದರೆ, ಭಾರತದ ಪ್ರಮುಖ ಯೂನಿಕಾರ್ನ್ ಸ್ಟಾರ್ಟ್‌­­­­­­­­ಅಪ್‌ಗಳಲ್ಲೂ ಚೀನದ ಹೂಡಿಕೆಯಿದೆ.

ಆದಾಗ್ಯೂ ಭದ್ರತೆ, ಡೇಟಾ ಸುರಕ್ಷತೆಯ ದೃಷ್ಟಿಯಿಂದ ಭಾರತ ಸರಕಾರ ಈ ನಡೆಗೆ ಮುಂದಾಗಿದೆಯಾದರೂ, ಇದನ್ನು ಚೀನ ಸರಕಾರದ ಉದ್ಧಟತನಕ್ಕೆ ನೀಡಲಾಗುತ್ತಿರುವ ಸಂದೇಶ ಎಂದೇ ವಿಶ್ಲೇಷಕರು ಹೇಳುತ್ತಿದ್ದಾರೆ.

Advertisement

ಭಾರತ ಸರಕಾರದ ಈ ಕ್ರಮದ ಅನಂತರ, ನಿಷೇಧಕ್ಕೊಳಗಾಗಿರುವ ಚೀನದ ಆ್ಯಪ್‌ಗಳು ಸ್ಪಷ್ಟನೆ ನೀಡಲಾರಂಭಿಸಿವೆ. ಅದರಲ್ಲೂ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್‌ ಸಂಸ್ಥೆ, ತಾನು ಭಾರತೀಯರ ಡೇಟಾವನ್ನು ಚೀನ ಆಡಳಿತ ಸೇರಿದಂತೆ, ಯಾವುದೇ ಸರಕಾರದೊಂದಿಗೂ ಹಂಚಿಕೊಂಡಿಲ್ಲ.

ಭಾರತೀಯ ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದೆ. ಆ್ಯಪ್‌ ನಿಷೇಧವೆನ್ನುವುದು ಚಿಕ್ಕ ನಡೆಯೇನೂ ಅಲ್ಲ ಎನ್ನುವುದನ್ನು ಗಮನಿಸಬೇಕು. ಏಕೆಂದರೆ ಬಹುಕೋಟಿ ಉದ್ಯಮ.

ಟಿಕ್‌ ಟಾಕ್‌ನ ಮಾತೃಸಂಸ್ಥೆ ಬೈಟ್‌ ಡ್ಯಾನ್ಸ್‌ನಂಥ ಕಂಪೆನಿಗಳು ಈ ರೀತಿಯ ಆ್ಯಪ್‌ಗಳ ಮೂಲಕ ಸಹಸ್ರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ.  ಭಾರತ ಸೇರಿದಂತೆ ಜಗತ್ತಿನಾದ್ಯಂತ ಆ್ಯಪ್‌ ಆರ್ಥಿಕತೆಯ ವ್ಯಾಪ್ತಿ ಅಗಾಧವಾಗಿ ವಿಸ್ತರಿಸುತ್ತಲೇ ಸಾಗಿದೆ.

ಆದರೆ ಇದೇ ವೇಳೆಯಲ್ಲೇ ದೇಶದ ಹಿತದೃಷ್ಟಿಯಿಂದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವುದೂ ಅಗತ್ಯವಾಗುತ್ತದೆ. ಆತ್ಮನಿರ್ಭರತೆಯೆಡೆಗಿನ ಪಯಣದಲ್ಲಿ ಈ ರೀತಿಯ ನಿರ್ಣಯಗಳು ಅಗತ್ಯ ಎನ್ನುವುದನ್ನು ನಾವು ಮನಗಾಣಬೇಕು.

ಆದಾಗ್ಯೂ, ಆ್ಯಪ್‌ಗಳನ್ನು ನಿಷೇಧಿಸಬಹುದು ಆದರೆ ಚೀನದ ಮೊಬೈಲ್‌ಗಳು ಇವೆಯಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲೂ ದೇಶ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕಾದ ಅಗತ್ಯವಿದ್ದು, ಅತ್ಯುನ್ನತ ಗುಣಮಟ್ಟದ ಬ್ರಾಂಡ್‌ಗಳು ನಮ್ಮಲ್ಲೇ ತಯಾರಾದರೆ ನಿಸ್ಸಂಶಯವಾಗಿಯೂ ಗ್ರಾಹಕರು ಭಾರತೀಯ ಪ್ರಾಡಕ್ಟ್ ಗಳನ್ನೇ ತೆಗೆದುಕೊಳ್ಳಲು ವಿಚಾರ ಮಾಡುವುದಿಲ್ಲ.

ದೇಶದಲ್ಲಿ ಕೌಶಲದ ಕೊರತೆಯೇನೂ ಇಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ನಿಬ್ಬೆರಗಾಗುವಂತೆ ನಾವು ಮುನ್ನಡೆಯುತ್ತಿದ್ದೇವೆ. ಇಂಥ ಸಮಯದಲ್ಲಿ ಆವಿಷ್ಕಾರಗಳ ಪ್ರಮಾಣವೂ ಅಧಿಕವಾಗಬೇಕಾದ ಅಗತ್ಯವಿರುತ್ತದೆ.

ಚೀನದ ಆ್ಯಪ್‌ಗಳಿಗೆ ಸವಾಲೊಡ್ಡುವಂಥ ಆ್ಯಪ್‌ಗಳಾಗಲಿ, ಉತ್ಪನ್ನಗಳಾಗಲಿ ನಮ್ಮಲ್ಲೇ ನಿರ್ಮಾಣವಾಗಲೇಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ, ಇಂಥ ಕ್ಷೇತ್ರಗಳಲ್ಲಿ ಮತ್ತೂಂದು ದೇಶದ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಸಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next