ಚಿಂಚೋಳಿ: ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕಳಪೆಮಟ್ಟದ ಸೋಯಾಬಿನ್ ಬಿತ್ತನೆ ಬೀಜ ನೀಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ ಮುಖಂಡ ಸುಭಾಷ ರಾಠೊಡ ಬಿಜೆಪಿ ಸರಕಾರದ ವಿರುದ್ಧ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಬಿತ್ತನೆ ಮಾಡುವ ಪೂರ್ವದಲ್ಲಿ ಕೃಷಿ ಅಭಿಯಾನ ಮಾಡಿಲ್ಲ. ಅಲ್ಲದೇ ಬೀಜೋಪಚಾರ ಮಾಡುವ ಬಗ್ಗೆ ರೈತರಿಗೆ ಮಾಹಿತಿ ನೀಡಿಲ್ಲ. ಸರಕಾರ ರೈತರಲ್ಲಿ ಜಾಗೃತಿ ಮೂಡಿಸದೇ ಕತ್ತಲಿನಲ್ಲಿಟ್ಟಿದೆ ಎಂದರು. ಈಗಾಗಲೇ ಸೋಯಾಬಿನ್ ಬೀಜ ಬಿತ್ತನೆ ಮಾಡಿದ ರೈತರಿಗೆ ಪರಿಹಾರ ನೀಡಬೇಕು. ಕೃಷಿ ರೈತ ಸಂಪರ್ಕ ಕೇಂದ್ರದಿಂದ ನೀಡಿದ ಸೋಯಾಬಿನ್ ಬೀಜ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಪಡೆದುಕೊಳ್ಳಲು ಬಂದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಅಲ್ಲಿ ಜನ ಜಂಗುಳಿ ಇದ್ದರೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ ಮತ್ತು ಹೆಚ್ಚುವರಿ ಕೌಂಟರ್ ತೆರೆದಿಲ್ಲ. ರೈತರು ನೂಕು ನುಗ್ಗಲಿನ ನಡುವೆ ಬೀಜ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದರು.
ಅರಿಶಿಣ ಬೆಳೆದ ರೈತರು ಅರಿಶಿಣ ಮಾರಾಟ ಮಾಡಲು ಆಗಿಲ್ಲ. ತಾಲೂಕಿ ನಲ್ಲಿಯೇ ಅರಿಶಿಣವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಪ್ರಾರಂಭಿಸಬೇಕೆಂದು ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಗಮನ ಸೆಳೆಯಲಾಗಿದೆ. ಈ ಕುರಿತು ಶಾಸಕ ಡಾ| ಅವಿನಾಶ ಜಾಧವ ಮತ್ತು ಸಂಸದ ಡಾ| ಉಮೇಶ ಜಾಧವ ಚಕಾರ ಎತ್ತಿಲ್ಲ ಎಂದು ಹೇಳಿದರು.
ಬಸವರಾಜ ಮಲಿ, ಗೋಪಾಲ ರಾವ್ ಕಟ್ಟಿಮನಿ, ಅನೀಲಕುಮಾರ ಜಮಾದಾರ, ಆರ್. ಗಣಪತರಾವ್, ಅಬ್ದುಲ್ ಬಾಸೀತ, ಸಂತೋಷ ಗುತ್ತೆದಾರ ಇದ್ದರು.