Advertisement

ಕಲ್ಲು ಗಣಿ ಕಾರ್ಮಿಕರಿಗೆ ಉದ್ಯೋಗ ನೀಡಿ

11:05 AM Nov 13, 2019 | Naveen |

ಚಿಂಚೋಳಿ: ತಾಲೂಕಿನ ಮಿರಿಯಾಣ ಗ್ರಾಮದ ಸುತ್ತಮುತ್ತ ಇರುವ ಕಲ್ಲು ಗಣಿಗಳು ಬಂದ್‌ ಆಗಿದ್ದು, ಕಾರ್ಮಿಕರು ಹಾಗೂ ಅವರ ಕುಟುಂಬದವರು ಆರ್ಥಿಕವಾಗಿ ಕುಗ್ಗಿ ಹೋಗಿದ್ದು, ಕೂಡಲೇ ಅವರಿಗೆ ಉದ್ಯೋಗ ಒದಗಿಸಬೇಕು ಎಂದು ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಅಬ್ದುಲ್‌ ರವೂಫ ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಕಲ್ಲುಗಣಿ ಕಾರ್ಮಿಕರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಮಿರಿಯಾಣ-ಚಿಂಚೋಳಿ ವರೆಗೆ ಹಮ್ಮಿಕೊಂಡಿರುವ ಗಣಿ ಕಾರ್ಮಿಕರ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಿರಿಯಾಣ, ಕಿಷ್ಟಾಪುರ, ಭೈರಂಪಳ್ಳಿ, ಕಲ್ಲೂರ, ಸೋಮಲಿಂಗದಳ್ಳಿ ಗ್ರಾಮಗಳಲ್ಲಿ ಇರುವ ಗಣಿಗಳಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಕಲ್ಲು ಗಣಿಗಳನ್ನು ಭೂ ವಿಜ್ಞಾನ ಇಲಾಖೆ ಅನಾವಶ್ಯಕವಾಗಿ ಬಂದ್‌ ಮಾಡಿದೆ ಎಂದು ಆಪಾದಿಸಿದರು.

ಗಣಿ ಪ್ರಾರಂಭಿಸಲು ಗುತ್ತಿಗೆ ನೀಡುವಂತೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಆದರೆ ಸರ್ಕಾರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗಣಿಗಳಲ್ಲಿ ಕೆಲಸವಿಲ್ಲದ ಕಾರಣ, ಕೂಲಿ ಕಾರ್ಮಿಕರು ಹೈದ್ರಾಬಾದ, ತಾಂಡೂರ, ತೆಲಂಗಾಣ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಅನೇಕ ಕಾರ್ಮಿಕರು ಆರ್ಥಿಕವಾಗಿ ಕುಗ್ಗಿ, ಜೀವವನ್ನೇ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಶಾಸಕರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಶಿವಕುಮಾರ ಕೊಳ್ಳುರ ಮಾತನಾಡಿ, ಕಲ್ಲು ಗಣಿ ಪ್ರಾರಂಭಿಸುವುದಕ್ಕಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಶಾಸಕರು ಈ ಕುರಿತು ಗಮನ ಹರಿಸಬೇಕೆಂದು ಅಗ್ರಹಿಸಿದರು. ಡಾ| ತುಕಾರಾಮ ಮಪವಾರ, ರವಿಶಂಕರೆಡ್ಡಿ ಮುತ್ತಂಗಿ, ಶರಣಬಸಪ್ಪ ಮಮಶೆಟ್ಟಿ,ಜಾಫರ, ಅರವಿಂದ ಪಾಟೀಲ, ನಂದು ಪಾಟೀಲ, ಪ್ರದೀಪ ತಿರಲಾಪುರ ಕಾರ್ಮಿಕರ ಪರವಾಗಿ ಮಾತನಾಡಿದರು.

Advertisement

ಪಾದಯಾತ್ರೆಯಲ್ಲಿ 200ಕ್ಕೂ ಹೆಚ್ಚು ಕಲ್ಲು ಗಣಿ ಕಾರ್ಮಿಕರು ಭಾಗವಹಿಸಿದ್ದರು. ಪಿಎಸ್‌ಐ ಸಂತೋಷ ರಾಠೊಡ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next