ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಹತ್ತಿರದಲ್ಲಿ ಹಲವು ವರ್ಷಗಳಿಂದ ಪ್ರಗತಿ ಕಾಣದೇ ಕುಂಠಿತಗೊಂಡಿರುವ ತಾಲೂಕು ಕ್ರೀಡಾಂಗಣವನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲು ಯುವಜನಸೇವಾ ಮತ್ತು ಸಬಲೀಕರಣ ಇಲಾಖೆಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ.
ತಾಲೂಕು ಮಟ್ಟದ ಕ್ರೀಡಾಂಗಣಕ್ಕಾಗಿ ಪೋಲಕಪಳ್ಳಿ ಗ್ರಾಮದ ಹತ್ತಿರದ ಸರಕಾರಿ ಜಮೀನಿನಲ್ಲಿ ಎಂಟು ಎಕರೆ ಮಂಜೂರಿಗೊಳಿಸಿ ಅದರ ಅಭಿವೃದ್ಧಿಗಾಗಿ 1994-95ನೇ ಸಾಲಿನಲ್ಲಿ ಆಗಿನ ಕನ್ನಡ ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದ ಲೀಲಾದೇವಿ ಆರ್.ಪ್ರಸಾದ 20ಲಕ್ಷ ರೂ. ಮಂಜೂರಿಗೊಳಿಸಿ ಉದ್ಘಾಟಿಸಿದ್ದರು.
ಕ್ರೀಡಾಂಗಣದಲ್ಲಿ ಪೆವಿಲಿಯನ್, ಫಿಲ್ಡ್ ಮತ್ತು ಟ್ರ್ಯಾಕ್ ನಿರ್ಮಿಸಿದ ನಂತರ ಕ್ರೀಡಾಂಗಣ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಮಂಜೂರಿಗೊಳಿಸದೇ ಇರುವುದರಿಂದ ಮೊದಲ ಸಲ ನಿರ್ಮಿಸಿದ ಪೆವಿಲಿಯನ್ ಮತ್ತು ಪಿಲ್ಡ್ ಮತ್ತು ಟ್ರ್ಯಾಕ್ ಹಾಳಾಗಿ ಹೋಗಿದ್ದರಿಂದ ಇಲ್ಲಿ ಯಾವುದೇ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಹಾಗೂ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾ ಚಟವಟಿಕೆಗಳು ನಡೆಯುತ್ತಿಲ್ಲ.
ಸರ್ಕಾರ ತಾಲೂಕು ಮಟ್ಟದ ಕ್ರೀಡಾಂಗಣ ಅಭಿವೃದ್ಧಿಗೋಸ್ಕರ ನಿರ್ಧಾರ ಕೈಗೊಂಡಿದ್ದರಿಂದ ಕೆಕೆಆರ್‌ಡಿಬಿ ವತಿಯಿಂದ ಪ್ರಸಕ್ತ ಸಾಲಿನ 2020-21ನೇ ಸಾಲಿನಲ್ಲಿ ಎರಡು ಕೋಟಿ ರೂ. ಅನುದಾನ ನೀಡಿರುವುದರಿಂದ ಕ್ರೀಡಾಂಗಣ ಕಾಂಪೌಂಡ್ ಗೋಡೆ ನಿರ್ಮಾಣ, ಸಿಮೆಂಟ್ ರಸ್ತೆ, ಪೆವಿಲಿಯನ್ ಕೋಣೆಗಳ ದುರಸ್ತಿ ಮತ್ತು ಕೆಟ್ಟು ಹೋಗಿರುವ ಫಿಲ್ಡ್ ಮತ್ತು ಟ್ರ್ಯಾಕ್ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕಾಮಗಾರಿಗಳಲ್ಲಿ ಕೆಂಪು ಉಸುಕು ಬಳಕೆ ಮಾಡದೇ ಸ್ಥಳೀಯ ಮುಲ್ಲಾಮಾರಿ ನದಿಯಲ್ಲಿರುವ ಉಸುಕು ಬಳಕೆ ಮಾಡಲಾಗುತ್ತಿದೆ. ಕಾಂಪೌಂಡ್ ಗೋಡೆ ನಿರ್ಮಾಣದಲ್ಲಿ ಉಸುಕು ಮತ್ತು ಸಿಮೆಂಟ್ ಕಾಂಕ್ರಿಟ್ ಬಳಕೆ ಮಾಡದೇ ಕರಿಕಲ್ಲಿನ ಗುಂಡುಗಳನ್ನು ತುಂಬಿ ಮೇಲೆ ಪ್ಲಾಸ್ಟರ್ ಮಾಡಲಾಗುತ್ತಿದೆ.
ಕ್ರೀಡಾಂಗಣದಲ್ಲಿ ಸಿಮೆಂಟ ರಸ್ತೆ ನಿರ್ಮಾಣ, ಕ್ರೀಡಾಪಟುಗಳ ವಿಶ್ರಾಂತಿ ಕೋಣೆಗಳ (ಡ್ರೆಸ್ಸಿಂಗ್ ರೂಮ್)ಕೆಲಸಗಳು ಅಷ್ಟೇನು ಗುಣಮಟ್ಟದಿಂದ ನಡೆಯುತ್ತಿಲ್ಲ. ಫಿಲ್ಡ್ ಮತ್ತು ಟ್ರ್ಯಾಕ್ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲವೆಂದು ಕಳೆದ ವಾರ ಭೇಟಿ ನೀಡಿದ ಜಿಲ್ಲಾ ಯುವಜನಸೇವಾ ಮತ್ತು ಸಬಲೀಕರಣ ಇಲಾಖೆಗೆ ಸಂಬಂಧಿಸಿದ ಎಇಇ ಸ್ಥಳೀಯ ಗುತ್ತಿಗೆದಾರನಿಗೆ ಸೂಚನೆ ನೀಡಿದ್ದಾರೆ. ಆದರೆ ಕೆಲಸ ಮಾತ್ರ ಕಳಪೆಮಟ್ಟದಿಂದ ನಡೆಯುತ್ತಿದೆ.
ಕಾಮಗಾರಿ ಟೆಂಡರ್ ಪಡೆದುಕೊಂಡಿರುವ ಪ್ರಥಮ ದರ್ಜೆ ಗುತ್ತಿಗೆದಾರ ಬಿಜೆಪಿ ಕಾರ್ಯಕರ್ತ. ಈತ ಕಳಪೆ ಮಟ್ಟದದಲ್ಲಿ ಕೆಲಸ ಮಾಡುತ್ತಿದ್ದಾನೆ. ಹಿಂದುಳಿದ ಪ್ರದೇಶದ ಗ್ರಾಮೀಣ ಕ್ರೀಡಾಪಟುಗಳ ಅನುಕೂಲಕ್ಕಾಗಿ ಶಾಸಕ ಡಾ| ಅವಿನಾಶ ಜಾಧವ ವಿವಿಧ ಯೋಜನೆ ಅಡಿಯಲ್ಲಿ ಕೋಟ್ಯಂತರ ರೂ. ಮಂಜೂರಿಗೊಳಿಸಿದ್ದಾರೆ. ಆದರೆ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂದು ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿ ನೋಡಿಲ್ಲ. ಈ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು.
-ಸಂತೋಷ ಗುತ್ತೇದಾರ, ತಾಲೂಕು ಎಸ್ಸಿ ಘಟಕದ ಕಾಂಗ್ರೆಸ್ ಅಧ್ಯಕ
ತಾಲೂಕು ಕ್ರೀಡಾಂಗಣ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಕಾಮಗಾರಿಯನ್ನು ದಿನನಿತ್ಯ ಎಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಉತ್ತಮ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡುವುದು ಲೋಕೋಪಯೋಗಿ ಇಲಾಖೆ ಮುಖ್ಯ ಉದ್ದೇಶವಾಗಿದೆ. ಇಲ್ಲಿಯೇ ಹೆಲಿಪ್ಯಾಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ಕಳಪೆಮಟ್ಟದ ಕಾಮಗಾರಿಗೆ ಅವಕಾಶವಿಲ್ಲ.
-ಆನಂದ ಕಟ್ಟಿ, ಎಇಇ, ಲೋಕೋಪಯೋಗಿ ಇಲಾಖೆ
-ಶಾಮರಾವ ಚಿಂಚೋಳಿ