Advertisement

G20 ಪ್ರಧಾನಿ ಮೋದಿ ಎಚ್ಚರಿಕೆ ಭೀತಿಯಿಂದ ಚೀನ ಅಧ್ಯಕ್ಷ ಜಿನ್‌ಪಿಂಗ್‌ ಗೈರು?

09:48 PM Sep 01, 2023 | Team Udayavani |

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಚೀನ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಗೈರಾಗುವ ಸಾಧ್ಯತೆಯೇ ಹೆಚ್ಚಿದೆ.

Advertisement

ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾರತ-ಚೀನಾ ಗಡಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ, ಕ್ಷಿ ಅವರಿಗೆ ನೇರಾನೇರ ತಾಕೀತು ಮಾಡಿದ್ದೇ ಇದಕ್ಕೆ ಪ್ರಮುಖ ಕಾರಣವೆಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಗಾಲ್ವಾನ್‌ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಸಂಬಂಧ ಹದಗೆಟ್ಟಿದ್ದು, ಗಡಿ ವಿಚಾರವಾಗಿ ಮನಸ್ತಾಪವೂ ಇದೆ. ಚೀನಾ ಪದೇಪದೆ ಕುತಂತ್ರ ರೂಪಿಸಿ ಭಾರತವನ್ನು ಕೆಣಕುತ್ತಿರುವುದು ಕೂಡ ಹೊಸತೇನಲ್ಲ. ಈ ನಡುವೆ ಕಳೆದ ತಿಂಗಳಷ್ಟೇ ದಕ್ಷಣ ಆಫ್ರಿಕಾದಲ್ಲಿ ನಡೆದಿದ್ದ ಬ್ರಿಕ್ಸ್‌ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಕ್ಷಿ ಜಿನ್‌ಪಿಂಗ್‌ ಮುಖಾಮುಖಿಯಾಗಿದ್ದರು. ಈ ವೇಳೆ ಗಡಿ ವಿವಾದಗಳ ಕುರಿತು ಮೋದಿ ಕಠಿಣವಾಗಿಯೇ ಧ್ವನಿ ಎತ್ತಿದ್ದರು.

ಈಗ ಜಿ20 ರಾಷ್ಟ್ರಗಳು ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲೇಬೇಕಿದ್ದು, ಕ್ಷಿ ಆಗಮಿಸಿದರೆ ಅವರೂ ಕೂಡ ಭಾಗಿಯಾಗಬೇಕಿರುತ್ತದೆ. ಈ ವೇಳೆ ವ್ಯಾಪಾರ-ವ್ಯವಹಾರ-ಸಹಕಾರಗಳ ಪ್ರಸ್ತಾಪಕ್ಕೂ ಮುಂಚೆ ಚೀನಾ ಗಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಂಡರೆ ಮಾತ್ರ ಭಾರತದ ಜತೆಗೆ ದ್ವಿಪಕ್ಷೀಯ ಸಭೆ ಮುಂದುವರಿಸಲು ಸಾಧ್ಯವೆಂದು ಭಾರತ ಈಗಾಗಲೇ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ಮಾತುಕತೆಯಿಂದ ನುಣುಚಿಕೊಳ್ಳಲು ಶೃಂಗದಿಂದಲೇ ಕ್ಷಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಸೇಫ್ಹೌಸ್‌, ಹೆಲಿಪ್ಯಾಡ್‌, ಕಮಾಂಡೋಸ್‌: ಭಾರೀ ಭದ್ರತೆ
ಜಿ20 ರಾಷ್ಟ್ರಗಳ ಮುಖ್ಯಸ್ಥರ ರಕ್ಷಣೆಗೆ ಭಾರತೀಯ ಭದ್ರತಾಪಡೆಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಯಾವುದೇ ರೀತಿಯ ಕಠಿಣ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡಿವೆ. ಅಹಿತಕರ ಘಟನೆಗಳು ವರದಿಯಾದರೆ ತಕ್ಷಣವೇ ಅತಿಥಿಗಳನ್ನು ಪಾರುಮಾಡಲು ಹೆಲಿಪ್ಯಾಡ್‌ಗಳನ್ನು ಗುರುತಿಸಲಾಗಿದೆ. ಅಲ್ಲದೇ, ಅತಿಥಿಗಳು ಉಳಿದಿರುವ ಹೋಟೆಲ್‌ಗ‌ಳ ಸಮೀಪದಲ್ಲೇ ಅವರನ್ನು ಸುರಕ್ಷಿತವಾಗಿ ಇರಿಸಬಲ್ಲ ರಹಸ್ಯ ಮನೆಗಳನ್ನೂ ಸ್ಥಾಪಿಸಲಾಗಿದ್ದು, ರಾಸಾಯನಿಕ, ಜೈವಿಕ, ವಿಕಿರಣ ಯಾವುದೇ ದಾಳಿಯನ್ನೂ ಸಮರ್ಥವಾಗಿ ಎದುರಿಸಬಲ್ಲ ಪಡೆ ಮತ್ತು ಕಮಾಂಡೊಗಳನ್ನೂ ನಿಯೋಜಿಸಲಾಗಿದೆ.

Advertisement

ಲೆಫ್ಟ್ ಸ್ಟೇರಿಂಗ್‌ ಕಾರು, 450 ಚಾಲಕರು
ವಿದೇಶಿ ಅತಿಥಿಗಳನ್ನು ಸ್ವಾಗತಿಸಲು ಕೇಂದ್ರ ಸರ್ಕಾರ ಬಿಎಂಡಬ್ಲೂé, ಆಡಿ ಸೇರಿದಂತೆ ಹಲವು ಬುಲೆಟ್‌ ರೆಸಿಸ್ಟೆಂಟ್‌ ಹಾಗೂ ಲೆಫ್ಟ್ ಸ್ಟೇರಿಂಗ್‌ ಕಾರುಗಳನ್ನು ಬಾಡಿಗೆ/ಖರೀದಿ ಪಡೆದಿದೆ. ಅಲ್ಲದೇ, ಅವುಗಳನ್ನು ಚಲಾಯಿಸಲು ವಿಶೇಷ ತರಬೇತಿ ಪಡೆದಿರುವ ಸಿಆರ್‌ಪಿಎಫ್ನ ವಿಶೇಷ ಭದ್ರತಾ ವಿಭಾಗದ 450 ಚಾಲಕರನ್ನು ನಿಯೋಜಿಸಿದೆ.

ನೀಟ್‌ ಸೂಪರ್‌ ಸ್ಪೆಷಾಲಿಟಿ ಪರೀಕ್ಷೆ ಮುಂದೂಡಿಕೆ
ವೈದ್ಯಕೀಯ ವಿಜ್ಞಾನ ರಾಷ್ಟ್ರೀಯ ಪರೀಕ್ಷಾ ಮಂಡಳಿ, ನವದೆಹಲಿಯು ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ನೀಟ್‌ ಸೂಪರ್‌ ಸ್ಪೆಷಾಲಿಟಿ (ಎಸ್‌ಎಸ್‌) 2023 ಪರೀಕ್ಷೆಯನ್ನು ಮುಂದೂಡುವುದಾಗಿ ತಿಳಿಸಿದೆ. ಸೆ.9 ಮತ್ತು 10ರಂದು ಪರೀಕ್ಷೆ ನಡೆಸಲು ಯೋಜಿಸಲಾಗಿತ್ತು. ಅದೇ ದಿನ ಜಿ20 ಸಭೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗುತ್ತಿದ್ದು, ಮುಂದಿನ ದಿನಾಂಕಗಳನ್ನು ಶೀಘ್ರವೇ ತಿಳಿಸುವುದಾಗಿಯೂ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next