ಚೀನಕ್ಕೆ ಬುದ್ಧಿ ಕಲಿಸಲು ಭಾರತಕ್ಕೆ ಸಾಧ್ಯವಿಲ್ಲ ಎಂದಲ್ಲ. ಹಾಗೆಂದು ಇದಕ್ಕಾಗಿ ಯುದ್ಧ ಮಾಡುವ ಅಗತ್ಯವೇ ಇಲ್ಲ. ವ್ಯಾಪಾರ ವ್ಯವಹಾರಗಳಿಗೆ ತುಸು ನಿಯಂತ್ರಣ ಹೇರಿದರೂ ಸಾಕು, ಚೀನ ತಾನಾಗೇ ಮಣಿಯುತ್ತದೆ.
ಪವಿತ್ರ ಕೈಲಾಸ ಮಾನಸ ಸರೋವರಕ್ಕೆ ಹಿಂದೂಗಳು ಕೈಗೊಳ್ಳುವ ವಾರ್ಷಿಕ ಯಾತ್ರೆಯನ್ನು ತಡೆಯುವ ಮೂಲಕ ಚೀನ ಗಡಿಯಲ್ಲಿ ಮತ್ತೂಮ್ಮೆ ತಕರಾರು ಆರಂಭಿಸಿದೆ. ಟಿಬೆಟ್‌ನಲ್ಲಿರುವ ಕೈಲಾಸ ಮಾನಸ ಸರೋವರ ಹಿಂದೂಗಳು ಮಾತ್ರವಲ್ಲದೆ ಬೌದ್ಧ ಹಾಗೂ ಜೈನರಿಗೂ ಪವಿತ್ರ ಕ್ಷೇತ್ರ. ಭಾರತೀಯರ ಗಾಢ ಧಾರ್ಮಿಕ ನಂಬಿಕೆಗಳು ಈ ಸ್ಥಳದ ಜತೆಗೆ ಗುರುತಿಸಿಕೊಂಡಿವೆ. ಟಿಬೆಟ್ ಈಗ ತನ್ನ ಆಧಿಪತ್ಯದಲ್ಲಿರುವುದರಿಂದ ಚೀನ ಪದೇ ಪದೇ ಏನಾದರೊಂದು ಕಿರಿಕಿರಿ ಉಂಟು ಮಾಡುತ್ತಿದೆ. ಇಲ್ಲಿಗೆ ಹೋಗಲು ಸುತ್ತು ಬಳಸಿನ ಇನ್ನೊಂದು ದಾರಿಯಿದ್ದರೂ ಸಿಕ್ಕಿಂ ದಾಟಿ ನಾಥು ಲಾ ಪಾಸ್ ಮೂಲಕ ಹೋಗುವುದು ಹತ್ತಿರದ ಮತ್ತು ತುಸು ಸುಲಭದ ದಾರಿ. ಬಹಳ ವರ್ಷಗಳಿಂದ ಮುಚ್ಚಿದ್ದ ಈ ದಾರಿ ಪ್ರಧಾನಿ ನರೇಂದ್ರ ಮೋದಿ ಚೀನ ಜತೆಗೆ ಬೆಳೆಸಿದ ರಾಜತಾಂತ್ರಿಕ ಸಂಬಂಧದಿಂದಾಗಿ ಕಳೆದ ವರ್ಷವಷ್ಟೆ ತೆರೆದಿತ್ತು. ಆದರೆ ಒಂದೇ ವರ್ಷದಲ್ಲಿ ಚೀನ ಈ ದಾರಿಯಲ್ಲಿ ಯಾತ್ರೆಗೆ ಅಡ್ಡಿಪಡಿಸುವ ಮೂಲಕ ಧಾರ್ಮಿಕ ಯಾತ್ರೆಯ ದಾರಿಯನ್ನೇ ಭಾರತವನ್ನು ಬ್ಲ್ಯಾಕ್‌ವೆುàಲ್ ಮಾಡಲು ಉಪಯೋಗಿಸುತ್ತಿರುವುದು ಅದರ ಕೀಳು ಮನಸ್ಥಿತಿಯನ್ನು ತೋರಿಸುತ್ತಿದೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟಿದ್ದ ಮೊದಲ ಬ್ಯಾಚಿನಲ್ಲಿದ್ದ 47 ಯಾತ್ರಿಕರನ್ನು ಚೀನದ ಸೈನಿಕರು ಸಿಕ್ಕಿಂ ಗಡಿಯಲ್ಲಿ ಸೋಮವಾರ ತಡೆದಿದ್ದಾರೆ. ಭಾರೀ ಮಳೆಯಿಂದಾಗಿ ಮುಂದಿನ ರಸ್ತೆ ಕುಸಿದು ಪ್ರಯಾಣಕ್ಕೆ ಯೋಗ್ಯವಾಗಿಲ್ಲ. ರಸ್ತೆ ಸರಿಯಾದ ಕೂಡಲೇ ಪ್ರಯಾಣ ಮುಂದುವರಿಸುವ ಕುರಿತು ಸೂಚನೆ ನೀಡುತ್ತೇವೆ ಎಂಬ ನೆಪವನ್ನು ಅಲ್ಲಿ ಸೈನಿಕರು ಹೇಳಿದ್ದಾರೆ. ಆದರೆ ನಿಜವಾದ ಕಾರಣ ಕೆಲ ದಿನಗಳ ಹಿಂದೆ ಚೀನ ಮತ್ತು ಭಾರತದ ಸೈನಿಕರ ನಡುವೆ ನಡೆದಿರುವ ಚಿಕ್ಕದೊಂದು ಘರ್ಷಣೆ. ಚೀನಿ ಸೇನೆ ಗಡಿದಾಟಿ ಬಂದು ಭಾರತದ ಎರಡು ಬಂಕರ್‌ಗಳನ್ನು ನಾಶಪಡಿಸಿತ್ತು. ಇದನ್ನು ಪ್ರಬಲವಾಗಿ ಪ್ರತಿರೋಧಿಸಿದ ಭಾರತೀಯ ಸೈನಿಕರು ಚೀನಿಯರನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ನೂಕಾಟ ತಳ್ಳಾಟವಾಗಿದೆ. ಅದರೆ ಅನಂತರ ಚೀನ, ಭಾರತದ ಸೈನಿಕರೇ ಗಡಿದಾಟಿ ಅತಿಕ್ರಮಣಗೈದಿದ್ದಾರೆ ಎಂದು ಹೇಳಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಸಾಚಾ ಎಂಬ ಸೋಗು ಹಾಕಿಕೊಂಡಿರುವುದು ಬೇರೆ ವಿಚಾರ.
ಚೀನ ಜತೆಗೆ ದಶಕಗಳಿಂದ ಗಡಿ ತಕರಾರು ಇದ್ದರೂ ಒಂದೇ ಒಂದು ಗುಂಡು ಹಾರಿಲ್ಲ ಎಂದು ಮೋದಿ ನೀಡಿದ ಹೇಳಿಕೆಯನ್ನು ಭಾರೀ ಉತ್ಸಾಹದಿಂದ ಸ್ವಾಗತಿಸಿದ್ದ ಚೀನ ಗುಂಡು ಹಾರಿಸದೆಯೂ ನೆರೆ ದೇಶವನ್ನು ಯಾವೆಲ್ಲ ರೀತಿಯಲ್ಲಿ ಕಾಡಬಹುದು ಎಂಬುದನ್ನು ಆಗಾಗ ತೋರಿಸಿಕೊಡುತ್ತಿದೆ. ಗಡಿಯ ಪಾವಿತ್ರ್ಯ ಕಾಯಲು ಭಾರತ ಎಷ್ಟೇ ಸಂಯಮ ವಹಿಸಿದರೂ ಚೀನಿ ಸೈನಿಕರು ಆಗಾಗ ಗಡಿದಾಟಿ ಬಂದು ಉಪಟಳ ನೀಡುತ್ತಿದ್ದಾರೆ.
ಎಷ್ಟೇ ದ್ವಿಪಕ್ಷೀಯ ಮಾತುಕತೆಗಳಾಗಿದ್ದರೂ ಚೀನದ ದ್ವಂದ್ವ ನೀತಿ ಬದಲಾಗಿಲ್ಲ. ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತಡೆಯಲು ಮುಖ್ಯ ಕಾರಣ ಮೋದಿಯ ಅಮೆರಿಕ ಭೇಟಿ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಭಾರತ-ಅಮೆರಿಕ ನಿಕಟವಾಗದಂತೆ ಚೀನದ ಕಳವಳ ಹೆಚ್ಚುತ್ತಿದೆ. ಏಷ್ಯಾದ ದೊಡ್ಡಣ್ಣನಾಗುವ ತನ್ನ ದಾರಿಗೆ ಭಾರತ ಮುಳ್ಳು ಎಂದು ಚೀನ ಭಾವಿಸಿದೆ. ಅಮೆರಿಕದ ಜತೆಗಿನ ಯಾವುದೇ ರೀತಿಯ ಸಂಬಂಧದಿಂದ ಭಾರತದ ಬಲವರ್ಧಿಸುತ್ತಾ ಹೋಗುತ್ತದೆ. ತನ್ನ ಕನಸು ಈಡೇರುವುದಿಲ್ಲ ಎಂದು ಚೆನ್ನಾಗಿ ಅರಿತಿರುವ ಚೀನ ಭಾರತದ ಪ್ರಾಬಲ್ಯವನ್ನು ತಡೆಯುವ ಸಲುವಾಗಿಯೇ ಪಾಕಿಸ್ಥಾನದ ಜತೆಗೆ ಆತ್ಮೀಯ ಸ್ನೇಹ ಸಾಧಿಸಿಕೊಂಡಿದೆ. ಪಾಕಿಸ್ಥಾನದಲ್ಲಿ ಒನ್ ಬೆಲ್ಟ್ ಒನ್ ರೋಡ್‌ನಂತಹ ಬೃಹತ್ ಯೋಜನೆಗಳು ಜಾರಿಗೊಳಿಸುತ್ತಿದೆ. ತನ್ನ ಹಿತಾಸಕ್ತಿಗೆ ಅಪಾಯಕಾರಿಯಾಗಿರುವ ಈ ಯೋಜನೆಗಳನ್ನು ಭಾರತ ವಿರೋಧಿಸುತ್ತಿದೆ. ಚೀನದ ಸಿಟ್ಟಿಗೆ ಇದೂ ಒಂದು ಕಾರಣ.
ಹಾಗೆಂದು ಚೀನಕ್ಕೆ ಬುದ್ಧಿ ಕಲಿಸಲು ಭಾರತಕ್ಕೆ ಸಾಧ್ಯವಿಲ್ಲ ಎಂದಲ್ಲ. ಇದಕ್ಕಾಗಿ ಯುದ್ಧ ಮಾಡುವ ಅಗತ್ಯವೇ ಇಲ್ಲ. ವ್ಯಾಪಾರ ವ್ಯವಹಾರಗಳಿಗೆ ತುಸು ನಿಯಂತ್ರಣ ಹೇರಿದರೂ ಸಾಕು, ಚೀನ ತಾನಾಗೇ ಮಣಿಯುತ್ತದೆ. ಕೆಲ ಸಮಯದ ಹಿಂದೆ ಭಾರತದ ಎನ್‌ಎಸ್‌ಜಿ ಸೇರ್ಪಡೆಯನ್ನು ವಿರೋಧಿಸಿದ ಕಾರಣಕ್ಕೆ ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಆಂದೋಲನ ನಡೆದಾಗ ಇದರ ಬಿಸಿ ಸರಿಯಾಗಿ ಮುಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ವಾಣಿಜ್ಯ ನಮ್ಮ ಬಳಿ ಇರುವ ಅತ್ಯಂತ ಪ್ರಬಲ ಅಸ್ತ್ರ. ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಸರಕಾರ ಚೀನದ ಜತೆಗಿನ ವ್ಯಾಪಾರವನ್ನು ನಿಷೇಧಿಸುವಂತಿಲ್ಲ. ಆದರೆ ಭಾರತದ ನಾಗರಿಕರಾಗಿ ನಾವು ಚೀನದ ಉತ್ಪನ್ನಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ತನ್ನ ರಫ್ತು ವ್ಯವಹಾರಕ್ಕೆ ಪೆಟ್ಟು ಬಿದ್ದಾಗ ಚೀನ ಮೆತ್ತಗಾಗಿಯೇ ಆಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಬುದ್ಧಿವಂತಿಕೆಯ ಲಕ್ಷಣ.