Advertisement

ಚೀನ ಉತ್ಪನ್ನ ಬಹಿಷ್ಕರಿಸದಿದ್ದರೆ ಗಂಡಾಂತರ

08:10 AM Jul 24, 2017 | Harsha Rao |

ಉಡುಪಿ: ಚೀನವು ರಾಜಕೀಯವಾಗಿ ಸೈನಿಕ ಆಕ್ರಮಣ ಒಂದು ಕಡೆ ನಡೆಸುತ್ತಿದ್ದರೆ ಇನ್ನೊಂದೆಡೆ ಭಾರತವನ್ನು ದುರ್ಬಲಗೊಳಿಸಲು ಆರ್ಥಿಕ ಆಕ್ರಮಣವನ್ನು ಮಾಡುತ್ತಿದೆ. ನಮ್ಮ ದೇಶ ಬಲಿಷ್ಠವಾಗಬೇಕಿದ್ದರೆ ಚೀನ ಉತ್ಪನ್ನಗಳನ್ನು ಬಹಿಷ್ಕರಿಸಲೇಬೇಕು. ಇಲ್ಲವಾದರೆ ಗಂಡಾಂತರ ತಪ್ಪಿದ್ದಲ್ಲ ಎಂದು ಸ್ವದೇಶಿ ಜಾಗರಣ್‌ ಮಂಚ್‌ನ ಅಖೀಲ ಭಾರತ ಸಹಸಂಯೋಜಕ ಪ್ರೊ| ಎಂ.ಬಿ. ಕುಮಾರಸ್ವಾಮಿ ಅವರು ಹೇಳಿದರು.

Advertisement

ಸ್ವದೇಶಿ ಜಾಗರಣ್‌ ಮಂಚ್‌ ವತಿಯಿಂದ ಸ್ವದೇಶಿ-ಸುರಕ್ಷಾ ಅಭಿಯಾನದ ಪ್ರಯುಕ್ತ ಉಡುಪಿಯ ಆರೆಸ್ಸೆಸ್‌ ಕಾರ್ಯಾಲಯದಲ್ಲಿ ಅವರು ಚೀನದ ಆರ್ಥಿಕ ಆಕ್ರಮಣದ ಕುರಿತು ಉಪನ್ಯಾಸಗೈದರು. ಚೀನ ಸೈಲೆಂಟ್‌ ಕಿಲ್ಲರ್‌ ದೇಶ. ಭಾರತದ 38,000 ಚದರ ಕಿ.ಮೀ.  ಭೂಮಿಯನ್ನು ಚೀನ ಅತಿಕ್ರಮಿಸಿದೆ. ಪಾಕಿಸ್ಥಾನವು ಭಾರತದ 5,183 ಚ.ಕಿ.ಮೀ. ಭೂಭಾಗವನ್ನು ಚೀನಕ್ಕೆ ದಾನ ಮಾಡಿದೆ.

ಭಾರತ-ಭೂತಾನ್‌-ಚೀನ ಗಡಿ ಭಾಗದ ಡೋಕ್ಲಾಮ್‌ ಪ್ರದೇಶವನ್ನು ಆಕ್ರಮಿಸಿ ರಸ್ತೆ ನಿರ್ಮಿಸಿ ಸಿಲಿಗುರಿ ಕಾರಿಡಾರ್‌ ಮೂಲಕ ಭಾರತದ ಈಶಾನ್ಯ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನ ಹೊಂಚು ಹಾಕಿ ಸೈನಿಕರನ್ನು ಮುಂದೆ ಬಿಟ್ಟಿದೆ. ಚೀನದೊಂದಿಗೆ ಭಾರತದ 3,500 ಕಿ.ಮೀ. ಭೂಗಡಿ ಇದೆ. 1988ರಲ್ಲಿ ರಾಜೀವ್‌ ಗಾಂಧಿಯವರು ಚೀನಕ್ಕೆ ಭೇಟಿ ನೀಡಿ ಗಡಿ ಸಮಸ್ಯೆ ಪರಿಹರಿಸಲು ಮಾತುಕತೆ ನಡೆಸಿದ್ದರೂ ಅದು ಫ‌ಲಪ್ರದವಾಗಿರಲಿಲ್ಲ ಎಂದರು.

ವಹಿವಾಟು ವೃದ್ಧಿಸಿಕೊಂಡ ಚೀನ
1990ರಿಂದ ಭಾರತ-ಚೀನ ದ್ವಿಪಕ್ಷೀಯ ವ್ಯಾಪಾರ ಮಾಡಿಕೊಂಡಿದೆ. 1 ಬಿಲಿಯನ್‌ ಡಾಲರ್‌ ಇದ್ದ ವಹಿವಾಟನ್ನು ಚೀನವು ಇಂದು 72 ಬಿಲಿಯನ್‌ ಡಾಲರ್‌ಗೆ ವೃದ್ಧಿಸಿಕೊಂಡಿದೆ. 2015-16ರಲ್ಲಿ ಚೀನಕ್ಕೆ ಶೇ. 3.6ರಷ್ಟು ಉತ್ಪನ್ನಗಳನ್ನು ಭಾರತ ರಫ್ತು ಮಾಡಿದ್ದರೆ, ಚೀನದಿಂದ ಭಾರತ ಶೇ. 15.8ರಷ್ಟು ಆಮದು ಮಾಡಿಕೊಂಡಿದೆ. 2001-02ರಲ್ಲಿ ಚೀನದೊಂದಿಗೆ ಭಾರತದ ವ್ಯಾಪಾರ ಕೊರತೆಯು 1 ಶತಕೋಟಿ ಡಾಲರ್‌ ಆಗಿತ್ತು. ಅದೇ 2015-16ರಲ್ಲಿ 53 ಶತಕೋಟಿ ಡಾಲರ್‌ಗೆ ಮುಟ್ಟಿದೆ. ಟಯರ್‌, ಮೊಬೈಲ್‌, ಸೋಲಾರ್‌ ಪ್ಯಾನೆಲ್‌ ನಿಂದ ಹಿಡಿದು ಎಲ್ಲ ಉಪಕರಣಗಳನ್ನೂ ಅಡ್ಡ ದಾರಿಯಲ್ಲಿ ಚೀನವು ಭಾರತಕ್ಕೆ ಡಂಪ್‌ ಮಾಡುತ್ತಿದೆ. 2012-13ರಲ್ಲಿ 52 ಶತಕೋಟಿ ಡಾಲರ್‌ ಮೌಲ್ಯದ ವಸ್ತು ಆಮದು, 13 ಶತಕೋಟಿ ಡಾಲರ್‌ ಮೌಲ್ಯದ ವಸ್ತು ರಫ್ತು ಇತ್ತು. ಪ್ರಸಕ್ತ 2015-16ರಲ್ಲಿ 62 ಶತಕೋಟಿ ಡಾಲರ್‌ ಆಮದು, ಕೇವಲ 9 ಶತಕೋಟಿ ಡಾಲರ್‌ನಷ್ಟು ರಫ್ತು ಆಗುತ್ತಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಚೀನ ಪಾಲು
ಭಾರತದ ಮಾರುಕಟ್ಟೆಗೆ ವಿವಿಧ ಉತ್ಪನ್ನಗಳ ಆಮದಿನಲ್ಲಿ ಚೀನದ ಪಾಲು ಬಹಳಷ್ಟಿದೆ. ಯಂತ್ರೋಪಕರಣ-ಶೇ. 25, ಹತ್ತಿ ನೂಲು ಹಾಗೂ ಸಿದ್ಧ ಉಡುಪುಗಳು-ಶೇ. 75, ರೇಷ್ಮೆ ನೂಲು ಹಾಗೂ ರೇಷ್ಮೆ ಬಟ್ಟೆ-ಶೇ. 90, ಕೃತಕ ನೂಲು- ಶೇ. 60, ರಾಸಾಯನಿಕ ಹಾಗೂ ಔಷಧ ಸಾಮಗ್ರಿ-ಶೇ. 30, ರಸಗೊಬ್ಬರ-ಶೇ. 60, ಪಿಂಗಾಣಿ ಸಾಮಗ್ರಿ-ಶೇ. 66, ಕಂಪ್ಯೂಟರ್‌ ತಂತ್ರಾಂಶ-ಶೇ. 33, ಉಕ್ಕು-ಶೇ. 25, ಎಲೆಕ್ಟ್ರಾನಿಕ್‌ ವಸ್ತುಗಳು-ಶೇ. 65, ಸಿಮೆಂಟು-ಶೇ.10, ಚರ್ಮದ ಉತ್ಪನ್ನ-ಶೇ. 63ರಷ್ಟು ಚೀನ ರಫ್ತು ಮಾಡುತ್ತದೆ ಎಂದು ಪ್ರೊ| ಕುಮಾರಸ್ವಾಮಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next