ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೈರುಹಾಜರಾಗಲಿದ್ದು, ಬದಲಿಯಾಗಿ ಚೀನಾ ಪ್ರಧಾನಿ ಲೀ ಕಿಯಾಂಗ್ ಹಾಜರಾಗಲಿದ್ದಾರೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ (ಸೆಪ್ಟೆಂಬರ್ 04) ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ:UV Fusion: ಅನಂತ ನೆನಪುಗಳು; ಎಸ್ತರ್ ಅನಂತಮೂರ್ತಿ
ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟನೆ ನೀಡಿರುವ ಚೀನಾ, ಭಾರತ ಸರ್ಕಾರದ ಆಹ್ವಾನದ ಮೇರೆಗೆ ನಮ್ಮ ಪ್ರಧಾನಿ ಲೀ ಕಿಯಾಂಗ್ ನವದೆಹಲಿಯಲ್ಲಿ ನಡೆಯಲಿರುವ 18ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದೆ.
ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಒಮ್ಮತದ ನಿರ್ಧಾರ, ವಿಶ್ವಾಸ ವೃದ್ಧಿ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರಕಲಿದೆ ಎಂಬ ಆಶಯ ಹೊಂದಿರುವುದಾಗಿ ಚೀನಾ ಪ್ರಕಟನೆಯಲ್ಲಿ ವಿವರಿಸಿದೆ.
ಏಕಕಾಲದಲ್ಲಿ ಇಬ್ಬರು ಪ್ರಭಾವಶಾಲಿ ಮುಖಂಡರನ್ನು ಚೀನಾ ವಿದೇಶಗಳಿಗೆ ಕಳುಹಿಸುವುದಿಲ್ಲ ಎಂದು ಸಮಜಾಯಿಷಿ ನೀಡುವ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜಿ20 ಶೃಂಗಸಭೆಗೆ ಗೈರುಹಾಜರಾಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಗೈರುಹಾಜರಾಗಲಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ನಿರಾಸೆ ವ್ಯಕ್ತಪಡಿಸಿದ್ದರು. ಚೀನಾ ಅಧ್ಯಕ್ಷ ಕ್ಸಿ ಗೈರುಹಾಜರಾಗುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬೈಡೆನ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.