Advertisement

ಚೀನಾ ಸೇನೆಯಿಂದ ಅರುಣಾಚಲದ ಐವರು ಯುವಕರ ಅಪಹರಣ, ಕೊನೆಗೂ ಬಿಡುಗಡೆ; ಏನಿದು ಘಟನೆ?

06:18 PM Sep 12, 2020 | Nagendra Trasi |

ಇಟಾನಗರ್(ಅರುಣಾಚಲಪ್ರದೇಶ): ಕಳೆದ ಹತ್ತು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಐವರು ಯುವಕರನ್ನು ಅಪಹರಿಸಿದ್ದ ಚೀನಾ ಸೇನಾಪಡೆ ಶನಿವಾರ (ಸೆಪ್ಟೆಂಬರ್ 12, 2020) ಎಲ್ಲರನ್ನು ಬಿಡುಗಡೆಗೊಳಿಸಿರುವುದಾಗಿ ಭಾರತೀಯ ಸೇನೆ ಖಚಿತಪಡಿಸಿದೆ.

Advertisement

ಏನಿದು ಘಟನೆ:

ಸುಮಾರು 11 ದಿನಗಳ ಹಿಂದೆ ಅರುಣಾಚಲ ಪ್ರದೇಶದ ಸುಬಾನ್ ಸಿರಿ ಜಿಲ್ಲೆಯ ಐವರು ಯುವಕರನ್ನು ಚೀನಾ ಪಡೆ ಅಪಹರಿಸಿತ್ತು. ಇಂದು ಐವರನ್ನು ಪೂರ್ವ ಅರುಣಾಚಲ ಪ್ರದೇಶದ ಕಿಬಿಥು ಸಮೀಪದ ದಾಮೈಯಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.

ಸುಬಾನ್ ಸಿರಿ ಜಿಲ್ಲೆಯ ಎಲ್ ಎಸಿ ಸಮೀಪ ಅಡ್ಡಾಡುತ್ತಿದ್ದ ಅರುಣಾಚಲ ಪ್ರದೇಶದ ಐವರು ಯುವಕರನ್ನು ಚೀನಾಪಡೆ ಅಪಹರಿಸಿತ್ತು. ಈ ಕುರಿತು ಭಾರತೀಯ ಸೇನಾಪಡೆ ಹಾಟ್ ಲೈನ್ ಮೂಲಕ ಪೀಪಲ್ ಲಿಬರೇಷನ್ ಆರ್ಮಿಯನ್ನು ಸಂಪರ್ಕಿಸಿ, ಯುವಕರನ್ನು ಪತ್ತೆಹಚ್ಚಿ, ಮರಳಿ ಭಾರತಕ್ಕೆ ಒಪ್ಪಿಸುವಂತೆ ತಿಳಿಸಿತ್ತು.

ಇದನ್ನೂ ಓದಿ: ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಆದಿತ್ಯ ವಿಧಿವಶ; ಗಣ್ಯರ ಸಂತಾಪ

Advertisement

ಸೆಪ್ಟೆಂಬರ್ 8ರಂದು ಈ ಬಗ್ಗೆ ಹಾಟ್ ಲೈನ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾ ಸೇನೆ, ನಾಪತ್ತೆಯಾಗಿರುವ ಐವರು ಯುವಕರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿತ್ತು. ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್ 12ರಂದು ಐವರನ್ನು ಭಾರತೀಯ ಸೇನೆ ಕಿಬಿಥು ಬಳಿ ತಮ್ಮ ಸುಪರ್ದಿಗೆ ತೆಗೆದುಕೊಂಡಿರುವುದಾಗಿ ಲೆಫ್ಟಿನೆಂಟ್ ಕರ್ನಲ್ ಹರ್ಷ ವರ್ಧನ್ ಪಾಂಡೆ ತಿಳಿಸಿದ್ದಾರೆ.

ಭಾರತೀಯ ಸೇನಾಪಡೆ ನೀಡಿರುವ ಪ್ರಕಟಣೆಯಲ್ಲಿ, ಕೋವಿಡ್ 19 ನಿಯಮಾವಳಿ ಪ್ರಕಾರ ಐವರು ಯುವಕರನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು. ನಂತರ ಅವರನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದೆ.

ಅರುಣಾಚಲ ಪ್ರದೇಶದ ಸುಬಾನ್ ಸಿರಿ ಜಿಲ್ಲೆಯಲ್ಲಿ ಈ ವರ್ಷ ನಡೆದ 3ನೇ ಘಟನೆ ಇದಾಗಿದೆ. ಭಾರತೀಯ ಸೇನೆಯ ನಿರಂತರವಾದ ಪ್ರಯತ್ನದಿಂದ ಈ ಹಿಂದಿನ ಎರಡು ಘಟನೆಯಲ್ಲಿಯೂ ವ್ಯಕ್ತಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿತ್ತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next