ಕೋವಿಡ್ ಬಿಕ್ಕಟ್ಟಿನ ಸಮಯದಲ್ಲೂ ಚೀನದ ದಮನಕಾರಿ ನೀತಿಗಳು ಮುಂದುವರಿದೇ ಇವೆ. ಮುಂದುವರಿಯುವುದಷ್ಟೇ ಅಲ್ಲದೇ, ಅದರ ತೀವ್ರತೆಯೂ ಅಧಿಕವಾಗುತ್ತಿದೆ. ಇತ್ತ ಭಾರತದ ಜತೆ ಗಡಿ ತಂಟೆ ತೆಗೆದು ಕೆಲವು ಸಮಯದಿಂದ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿರುವ ಚೀನ, ಇನ್ನೊಂದೆಡೆ ಅತ್ತ ಹಾಂಗ್‌ಕಾಂಗ್‌ನಲ್ಲೂ ತನ್ನ ದರ್ಪವನ್ನು ಮುಂದುವರಿಸಿದೆ.
ಚೀನದ ಸಂಸತ್ತಿನಲ್ಲಿ ಗುರುವಾರ ಅನುಮೋದನೆಗೊಂಡಿರುವ ಹೊಸ ಕಠೊರ ಕಾನೂನು ಹಾಂಗ್‌ಕಾಂಗ್ ಮೇಲಿನ ಅದರ ಕಪಿಮುಷ್ಟಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವಂತಿದೆ. ಹಾಂಗ್‌ಕಾಂಗ್‌ಗೆ ಈಗ ಇರುವ ಅರ್ಧಸ್ವಾಯತ್ತತೆಯನ್ನೂ ಕಸಿದುಕೊಳ್ಳುವ ಹುನ್ನಾರ ಇದರ ಹಿಂದಿದೆ. ಈ ಕಾನೂನಿನ ಪ್ರಕಾರ, ಪ್ರಜಾಪ್ರಭುತ್ವದ ಬೇಡಿಕೆ ಇಡುವುದೂ ಇನ್ಮುಂದೆ ಅಪರಾಧವಾಗಲಿದ್ದು, ಸ್ವಾತಂತ್ರ್ಯದ ಬೇಡಿಕೆಯನ್ನು ದೇಶದ್ರೋಹ ಎಂದು ಪರಿಗಣಿಸುವ ಅಂಶಗಳು ಇದರಲ್ಲಿವೆ. ಇದೇನೇ ಇದ್ದರೂ, ಚೀನ ತನ್ನ ಉದ್ಧಟತನಕ್ಕೆ ಈ ಬಿಕ್ಕಟ್ಟಿನ ಸಮಯವನ್ನೇ ಆಯ್ದುಕೊಂಡಿದೆ ಎನ್ನುವುದನ್ನು ಗಮನಿಸಬೇಕು. ಇಂದು ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುವಲ್ಲಿ ವ್ಯಸ್ಥವಾಗಿವೆ. ಮತ್ತೂಂದು ರಾಷ್ಟ್ರದ ಸಹಾಯ ಮಾಡುವುದಿರಲಿ, ತಮ್ಮ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದೇ ಎಲ್ಲಕ್ಕೂ ದೊಡ್ಡ ಸವಾಲಾಗಿಬಿಟ್ಟಿದೆ. ಬಹುಶಃ ಈ ಕಾರಣಕ್ಕಾಗಿಯೇ ತನ್ನ ಉದ್ದೇಶ ಈಡೇರಿಕೆಗೆ ಇದೇ ಸರಿಯಾದ ಸಮಯ ಎಂದು ಜಿನ್‌ಪಿಂಗ್ ಆಡಳಿತ ಭಾವಿಸಿರಬಹುದು.
ಇನ್ನೊಂದೆಡೆ ಚೀನ, ಈ ಸಮಯದಲ್ಲಿ ತೈವಾನ್‌ಗೂ ಕಾಟ ಕೊಡಲಾರಂಭಿಸಿದೆ. ತೈವಾನ್ ಅನ್ನು ತನ್ನದೇ ಪ್ರಾಂತ್ಯವೆಂದು ಹೇಳುವ ಚೀನ, ಅದಕ್ಕೆ ರಾಷ್ಟ್ರದ ಮಾನ್ಯತೆಯನ್ನು ಕೊಡುವುದಿಲ್ಲ. ಈಗ ಚೀನ, ಅನ್ಯ ದಾರಿ ಸಿಗದೇ ಹೋದರೆ ತೈವಾನ್‌ನ ಮೇಲೆ ಸೇನಾ ಕಾರ್ಯಾಚರಣೆ ನಡೆಸಬೇಕಾದೀತೆಂದು ಎಚ್ಚರಿಸುತ್ತಿದೆ. ಒಟ್ಟಲ್ಲಿ, ಇಡೀ ಜಗತ್ತಿಗೆ ಕೋವಿಡ್ ಸೋಂಕು ತಗುಲಿಸಲು ಕಾರಣವಾದ ಚೀನ ಆ ಬಗ್ಗೆ ಪಶ್ಚಾತ್ತಾಪ ಪಡುವುದಿರಲಿ, ಈ ಸಮಸ್ಯೆಯ ಲಾಭ ಪಡೆಯಲು ಯೋಚಿಸುತ್ತಿರುವುದು ಖಂಡನೀಯವೇ ಸರಿ. ಗಮನಾರ್ಹ ಸಂಗತಿಯೆಂದರೆ, ಅದರ ಈ ದುರ್ವರ್ತನೆಯಾವ ದೇಶಕ್ಕೂ ಅಚ್ಚರಿ ಹುಟ್ಟಿಸುತ್ತಿಲ್ಲ ಎನ್ನುವುದು. ಅದರ ಸಾಮ್ರಾಜ್ಯವಿಸ್ತರಣೆಯ ದುರ್ಗುಣದ ಅರಿವು ಎಲ್ಲ ದೇಶಗಳಿಗೂ ಇದೆ. ಈ ಕಾರಣಕ್ಕಾಗಿಯೇ, ಭಾರತ ಕೂಡ ಚೀನ ವರ್ತನೆಯಿಂದ ವಿಚಲಿತವಾಗದೇ, ಅದಕ್ಕೆ ಅದರದ್ದೇ ಧಾಟಿಯಲ್ಲಿ ಉತ್ತರಿಸುತ್ತಿದೆ. ಚೀನದ ವಿರುದ್ಧ ವ್ಯಾಪಾರ ಯುದ್ಧದಲ್ಲಿ ತೊಡಗಿರುವ ಅಮೆರಿಕ ಕೂಡ ಭಾರತಕ್ಕೆ ಬೆಂಬಲ ಘೋಷಿಸುತ್ತಿದೆ.
ಅಮೆರಿಕವೆಂದಷ್ಟೇ ಅಲ್ಲ, ಕೋವಿಡ್ ಸಮಯದಲ್ಲಿ ಭಾರತ ಎಷ್ಟೊಂದು ರಾಷ್ಟ್ರಗಳೊಂದಿಗೆ ಸ್ನೇಹ ವೃದ್ಧಿಸಿಕೊಂಡಿದೆಯೆಂದರೆ, ಭಾರತವನ್ನು ಹೆಚ್ಚು ಕೆಣಕಿದರೆ ತನಗೆ ಅಪಾಯವಿದೆ ಎನ್ನುವುದು ಜಿನ್‌ಪಿಂಗ್ ಸರಕಾರಕ್ಕೆ ಚೆನ್ನಾಗಿ ಅರಿವಿದೆ. ಹೀಗಿದ್ದರೂ ಅದೇಕೆ ಈ ರೀತಿ ವರ್ತಿಸುತ್ತಿದೆ ಎನ್ನುವ ಪ್ರಶ್ನೆಗೆ ಮತ್ತಷ್ಟು ಉತ್ತರಗಳು ಎದುರಾಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಕೊರೊನಾ ವಿಚಾರದಲ್ಲಿ ಅದು ಆರಂಭಿಕ ದಿನಗಳಲ್ಲಿ ತೋರಿದ ವೈಫಲ್ಯದಿಂದ ಚೀನಿಯರು ರೋಸಿಹೋಗಿದ್ದಾರೆ, ಹೀಗಾಗಿ, ಚೀನ ಜನರ ಗಮನವನ್ನು ಬೇರೆಡೆ ಸೆಳೆಯಲು, ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವ ಈ ರೀತಿಯ ಅಡ್ಡದಾರಿಗೆ ಇಳಿದಿದೆ ಎನ್ನುವ ವಾದವೂ ಇದೆ. ಇದೇನೇ ಇದ್ದರೂ, ಚೀನದ ಇತಿಹಾಸದ ಅರಿವಿದ್ದವರು, ಯಾವ ಕಾರಣಕ್ಕೂ ಅದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಭಾರತವೂ ಕೂಡ ಎಚ್ಚರಿಕೆಯಿಂದ ಇರಲೇಬೇಕು.