Advertisement
ಅಮೆರಿಕದ ಆಗಸದಲ್ಲಿ ಎಂಟು ದಿನಗಳ ಕಾಲ ಬೇಹುಗಾರಿಕೆಯಲ್ಲಿ ನಿರತವಾಗಿದ್ದ ಚೀನದ ಬಲೂನ್ ಅನ್ನು ಅಮೆರಿಕದ ವಾಯುಪಡೆಯ ವಿಮಾನ ಹೊಡೆದುರುಳಿಸಿದ ಬಳಿಕ ದೊಡ್ಡಣ್ಣನ ವಿರುದ್ಧ ಕಿಡಿ ಕಾರಿದ್ದ ಚೀನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೀಕ್ಷ್ಣ ಮಾತುಗಳಲ್ಲಿ ತಿರುಗೇಟು ನೀಡಿದ್ದಾರೆ. ವಾಣಿಜ್ಯ, ವ್ಯವಹಾರ, ತಂತ್ರಜ್ಞಾನ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಒಡ್ಡಲು ಅಮೆರಿಕ ಸಿದ್ಧವಿದೆಯೇ ವಿನಾ ಸಂಘರ್ಷ ನಡೆಸದು.
Related Articles
Advertisement
ಈ ಬೆಳವಣಿಗೆಗಳ ನಡುವೆಯೇ ಚೀನ ಕಳೆದ ಹಲವಾರು ವರ್ಷಗಳಿಂದ ವಿಶ್ವದ ಪ್ರಬಲ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಗುರಿಯಾಗಿಸಿ ಇದೇ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು ಆ ದೇಶಗಳಲ್ಲಿನ ಭದ್ರತಾ ವ್ಯವಸ್ಥೆ, ರಕ್ಷಣ ಜಾಲದ ಪ್ರಮುಖ ನೆಲೆಗಳ ಮಾಹಿತಿಯನ್ನು ಕಲೆಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಮೆರಿಕದ ರಕ್ಷಣ ಮತ್ತು ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖೀಸಿ ಮಾಧ್ಯಮವೊಂದು ವರದಿ ಮಾಡಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಲ್ಲದೆ ಭಾರತ, ಜಪಾನ್ ಸಹಿತ ಕೆಲವೊಂದು ದೇಶಗಳಲ್ಲಿ ಚೀನ ಬೇಹುಗಾರಿಕೆ ನಡೆಸಲು ಇದೇ ಕಾರ್ಯತಂತ್ರವನ್ನು ಅನುಸರಿಸುತ್ತ ಬಂದಿದೆ. ಈ ಸಂಬಂಧ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾಹಿತಿಯನ್ನು ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕಣ್ಗಾವಲು ಏರ್‌ಶಿಪ್‌ಗ್ಳು ಚೀನ ಸೇನೆಯ ಭಾಗವಾಗಿದ್ದು ಬೇಹುಗಾರಿಕೆ ನಡೆಸಲೆಂದೇ ಈ ಬಲೂನ್‌ಗಳನ್ನು ಚೀನ ಸೇನೆ ಬಳಸುತ್ತಿದೆ. ಚೀನದ ಈ ವರ್ತನೆಯು ಆಯಾಯ ದೇಶಗಳ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವಂತಾಗಿದ್ದು ಅಂತಾರಾಷ್ಟ್ರೀಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತವನ್ನು ಗುರಿಯಾಗಿಸಿ ಚೀನ ಸೇನೆ ಗಡಿಯಲ್ಲಿ ನಿರಂತರವಾಗಿ ಒಂದಲ್ಲ ಒಂದು ತಗಾದೆ ತೆಗೆಯುತ್ತಲೇ ಬಂದಿದೆಯಲ್ಲದೆ ಇಂಥ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಗೂಢಚಾರಿಕೆಯನ್ನು ನಡೆಸುವ ಪ್ರಯತ್ನ ನಡೆಸುತ್ತಿರುವುದು ಹೊಸದೇನಲ್ಲ. ಇಂಥ ಸಂದರ್ಭದಲ್ಲಿ ಭಾರತ ಚೀನಕ್ಕೆ ಸೂಕ್ತ ತಿರುಗೇಟು ನೀಡಿದೆ ಕೂಡ. ಇದೀಗ ಅಮೆರಿಕದ ವಿರುದ್ಧವೂ ಚೀನ ಈ ಕಾರ್ಯತಂತ್ರವನ್ನು ಅನುಸರಿಸಲು ಮುಂದಾಗಿ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದರೂ ಚೀನ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಜಾಗತಿಕ ಸಮುದಾಯ ಅದರ ವಿರುದ್ಧ ಆಕ್ರಮಣಕಾರಿ ನಿಲುವನ್ನು ತಾಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.