Advertisement

ಪ್ರಾದೇಶಿಕ ಹಕ್ಕು ಸ್ಥಾಪನೆಗಾಗಿ ಚೀನದಿಂದ ಕುತಂತ್ರ

11:58 PM Nov 09, 2021 | Team Udayavani |

ಭಾರತದ ವಿರುದ್ಧ ದಶಕಗಳ ಹಿಂದಿನಿಂದಲೂ ಕತ್ತಿ ಝಳಪಿಸುತ್ತಲೇ ಬಂದಿರುವ ಚೀನದ ರಣೋತ್ಸಾಹ ಇನ್ನೂ ಕಡಿಮೆಯಾದಂತೆ ತೋರು ತ್ತಿಲ್ಲ. ವಾಸ್ತವಿಕ ಗಡಿ ರೇಖೆಯಲ್ಲಿ ಒಂದಲ್ಲ ಒಂದು ವಿಧದಲ್ಲಿ ತಗಾದೆ ತೆಗೆಯುವ ಮೂಲಕ ಭಾರತದೊಂದಿಗೆ ಜಗಳಕ್ಕೆ ಕಾಲು ಕೆರೆಯುತ್ತಲೇ ಇರುವ ಚೀನ ಇದೀಗ ತನ್ನ ರಣತಂತ್ರದ ಭಾಗವಾಗಿ ಭಾರತದ ವಿರುದ್ಧ ಟ್ವಿಟರ್‌ ಸಮರ ಸಾರಿದೆ.

Advertisement

ಒಂದೆಡೆಯಿಂದ ತೈವಾನ್‌ ಮತ್ತು ದಕ್ಷಿಣ ಚೀನ ಸಮುದ್ರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಅಧಿಪತ್ಯ ಸ್ಥಾಪನೆಯ ಉದ್ದೇಶ ದೊಂದಿಗೆ ಅಮೆರಿಕದೊಂದಿಗೆ ಪರೋಕ್ಷ ಸಮರ ನಡೆಸುತ್ತಲೇ ಬಂದಿ ರುವ ಕಮ್ಯುನಿಸ್ಟ್‌ ರಾಷ್ಟ್ರ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಎಲ್ಲ ಅಂತಾರಾಷ್ಟ್ರೀಯ ಒಪ್ಪಂದಗಳು, ನಿರ್ಣಯಗಳು ಮತ್ತು ಕಾನೂನು ಗಳನ್ನು ಉಲ್ಲಂ ಸಿ ಪರಮಾಣು ಶಸ್ತ್ರಾಸ್ತ್ರಗಳ ತಯಾರಿ ಮತ್ತು ಪ್ರಯೋಗ ವನ್ನು ನಡೆಸುವ ಮೂಲಕ ಅತ್ಯಾಧುನಿಕ ಮಾದರಿಯ ಪರಮಾಣು ಶಸ್ತ್ರಾಸ್ತ್ರಗಳು, ಸಮರ ನೌಕೆಗಳು, ಯುದ್ಧ ವಿಮಾನಗಳನ್ನು ತನ್ನ ಸೇನಾ ಬತ್ತಳಿಕೆಗೆ ಸೇರಿಸಿಕೊಂಡು ಇಡೀ ವಿಶ್ವ ಸಮುದಾಯದ ಶಾಂತಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಭಾರತದೊಂದಿಗಿನ ಎಲ್‌ಎಸಿಯಲ್ಲಿ ಚೀನ ತನ್ನ ಭೂ ಪ್ರದೇಶದಲ್ಲಿ ಹಳ್ಳಿಗಳನ್ನು ನಿರ್ಮಿಸಿ ಸೇನಾ ತುಕಡಿಗಳು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇದರ ಜತೆಯಲ್ಲಿ ಗಡಿ ಪ್ರದೇಶದಲ್ಲಿ ಸಮರಾಭ್ಯಾಸ ನಡೆಸಿ ಚೀನ ಈ ಭಾಗದ ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿದೆ. ಚೀನದ ಈ ಎಲ್ಲ ಸಮರ ತಂತ್ರಗಳಿಗೆ ಪ್ರತಿಯಾಗಿ ಭಾರತವೂ ತನ್ನ ವ್ಯಾಪ್ತಿಯಲ್ಲಿ ಯುದ್ಧ ಸನ್ನದ್ಧತೆಯನ್ನು ಮಾಡಿಕೊಳ್ಳುವ ಜತೆಯಲ್ಲಿ ಹೆಚ್ಚುವರಿಯಾಗಿ ಯೋಧರನ್ನು ನಿಯೋಜಿಸಿ ಯಾವುದೇ ಸವಾಲನ್ನು ಎದುರಿಸಲು ಸಜ್ಜಾಗಿದೆ.
ಏತನ್ಮಧ್ಯೆ ಚೀನ ವರ್ಷದ ಹಿಂದೆ ಲಡಾಖ್‌ನಲ್ಲಿ ಭಾರತ ಮತ್ತು ಚೀನದ ನಡುವೆ ಏರ್ಪಟ್ಟ ಉದ್ವಿಗ್ನ ಸ್ಥಿತಿ, ಆಗ ಗಡಿಯಲ್ಲಿ ನಿಯೋಜಿಸಲಾಗಿದ್ದ ಯೋಧರ, ಶಸ್ತ್ರಾಸ್ತ್ರಗಳ ಫೋಟೋಗಳನ್ನು ಟ್ವಿಟರ್‌ ಸಹಿತ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಅರುಣಾಚಲ ಪ್ರದೇಶದಲ್ಲಿ ಸೇನಾ ದಾಳಿ ನಡೆಸುವ ಬೆದರಿಕೆಯನ್ನು ಒಡ್ಡಲಾರಂಭಿಸಿದೆ.

ಇದನ್ನೂ ಓದಿ:ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿ ಸೆರೆ

Advertisement

ಇದರ ಜತೆಯಲ್ಲಿ ಚೀನ ತನ್ನ ಪರಮಾಪ್ತ ರಾಷ್ಟ್ರವಾದ ಪಾಕಿಸ್ತಾನಕ್ಕೆ ಅತ್ಯಾಧುನಿಕ ಸಮರ ನೌಕೆಗಳನ್ನು ಒದಗಿಸಿ ಭಾರತದ ವಿರುದ್ಧ ಪಾಕ್‌ಗೆ ಬೆಂಗಾವಲಾಗಿ ನಿಂತಿದೆ. ಅರುಣಾಚಲ ಪ್ರದೇಶ ಸಹಿತ ಎಲ್‌ಎಸಿ ಯುದ್ಧಕ್ಕೂ ಹದ್ದುಗಣ್ಣಿರಿಸಿರುವ ಭಾರತೀಯ ಸೇನೆ ಚೀನದ ಪ್ರತಿ ಕಾರ್ಯತಂತ್ರಕ್ಕೆ ಪ್ರತಿ ತಂತ್ರ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ.

ಚೀನ ಆಂತರಿಕವಾಗಿ ಪ್ರಸ್ತುತ ಹಲವಾರು ಸಮಸ್ಯೆಗಳನ್ನು ಎದುರಿಸು ತ್ತಿದೆ. ಆರ್ಥಿಕ ಹಿಂಜರಿತ, ಹೊಸದಾಗಿ ಕೊರೊನಾ ಸ್ಫೋಟ, ಆಹಾರ ಸಮಸ್ಯೆ, ಔಷಧ ಕೊರತೆ ಇತ್ಯಾದಿ. ಇದರ ನಡುವೆ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮೂರನೇ ಅವಧಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಕೆಂದೇ ರಾಷ್ಟ್ರೀಯ ವಿಚಾರ ಎತ್ತಿ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಒಟ್ಟಿನಲ್ಲಿ ಚೀನ ಪ್ರಾದೇಶಿಕ ಹಕ್ಕು ಸ್ಥಾಪನೆಗಾಗಿ ಈ ಎಲ್ಲ ಕುತಂತ್ರಗಳಲ್ಲಿ ತೊಡಗಿಸಿಕೊಂಡಿದ್ದು ಕೇವಲ ಭಾರತ ಮಾತ್ರವಲ್ಲದೆ ವಿಶ್ವ ಸಮುದಾಯದ ಮೇಲೆ ಒತ್ತಡ ಹೇರುವ ಮತ್ತು ಯುದ್ಧತಂತ್ರವನ್ನು ಅನುಸರಿಸುತ್ತಿದೆ. ಆದರೆ ಚೀನದ ಈ ಷಡ್ಯಂತ್ರಗಳನ್ನು ಅರಿತಿರುವ ಜಾಗತಿಕ ಸಮುದಾಯ ಚೀನಕ್ಕೆ ಪಾಠ ಕಲಿಸಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದೆ.

Advertisement

Udayavani is now on Telegram. Click here to join our channel and stay updated with the latest news.

Next