Advertisement
ಇಂಥ ಚೀನ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಸೂಚಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ನಗರದ ಎಂಟು ಸೆನ್ ಠಾಣೆಗಳಲ್ಲಿ ಆರು ತಿಂಗಳುಗಳ ಅವಧಿಯಲ್ಲಿ 600ಕ್ಕೂ ಹೆಚ್ಚು ಲೋನ್ ಆ್ಯಪ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಚೀನದ ಐವರು ದೇಶದಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಆಮಿಷವೊಡ್ಡಿ ನಕಲಿ ಕಂಪೆನಿಗಳನ್ನು ತೆರೆದು ಈ ಕೃತ್ಯವೆಸಗಿದ್ದಾರೆ.
Related Articles
Advertisement
ಸಾಲ ಆ್ಯಪ್‌ಗಳು ಯಾವುವು? :
ಪ್ರಾಥಮಿಕ ಮಾಹಿತಿ ಪ್ರಕಾರ ಕ್ಯಾಷ್ ಮಾಸ್ಟರ್, ಕ್ರೇಜಿರುಪಿ, ಐ-ರುಪಿ, ಕ್ಯಾಷಿನ್, ರುಪಿ ಮೆನು, ಇ-ರುಪಿ, ಮನಿ ಹೋಮ್, ಕ್ಯಾಶ್‌ಮೆನು, ಓಸೀನ್ ರುಪೀಸ್‌ವು, ಲೈಪ್ ವ್ಯಾಲೇಟ್, ರಾಯಲ್ ಕ್ಯಾಷ್, ಎಲಿಫ್ಯಾಂಟ್ ಕ್ಯಾಷ್, ರೈಸ್ ವ್ಯಾಲೇಟ್, ಬಾಕ್ಸ್ ಕ್ಯಾಷ್, ಸಿಸಿ ರುಪೀ, ಟೈಮ್ ಲೋನ್, ರಬ್ಬಿಟ್ ಲೋನ್- ಹೀಗೆ ಸಾವಿರಕ್ಕೂ ಅಧಿಕ ಆ್ಯಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಈ ಪೈಕಿ 130 ಆ್ಯಪ್‌ಗಳನ್ನು ನಗರ ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೇಳೆ ಚೀನ ಮೂಲದ ಉದ್ಯಮಿಗಳು ಭಾರತದಲ್ಲಿ ಕೆಲವು ನಿರುದ್ಯೋಗಿಗಳನ್ನು ವಿವಿಧ ಆ್ಯಪ್‌ಗಳ ಮೂಲಕ ಸಂಪರ್ಕಿಸಿ ಕಮಿಷನ್ ಆಮಿಷವೊಡ್ಡಿ ಅವರ ಹೆಸರಿನಲ್ಲಿ ಹಣ ಹೂಡಿಕೆ ಮತ್ತು ಸಾಲ ಆ್ಯಪ್ ಕಂಪೆನಿ ಸೃಷ್ಟಿಸಿದ್ದಲ್ಲದೆ, ಬ್ಯಾಂಕ್ ಖಾತೆಗಳನ್ನೂ ತೆರೆದಿದ್ದರು. ಮೊಬೈಲ್‌ಗಳಿಗೆ ಸಾಲದ ಆ್ಯಪ್‌ಲಿಂಕ್ ಕಳುಹಿಸಿ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಒಟಿಪಿ ನೀಡಿದರೆ ಐದಾರು ನಿಮಿಷಗಳಲ್ಲಿ 1 ಸಾವಿರ ರೂ.ನಿಂದ ಐದು ಲಕ್ಷ ರೂ.ವರೆಗೆ ಸಾಲ ನೀಡುವುದಾಗಿ ಹೇಳುತ್ತಿದ್ದರು. ಸಾಲ ನೀಡಿದ ಕೆಲವೇ ಕ್ಷಣಗಳ ಬಳಿಕ ಮತ್ತೂಂದು ಸಂದೇಶದಲ್ಲಿ ಸಾಲಕ್ಕೆ ಶೇ. 40ರಿಂದ ಶೇ. 60ರಷ್ಟು ಬಡ್ಡಿ ವಿಧಿಸಲಾಗುತ್ತಿದ್ದು, ನಿಗದಿತ ಸಮಯದಲ್ಲಿ ಸಾಲ ಹಿಂದಿರುಗಿಸಬೇಕು ಎಂದು ಎಚ್ಚರಿಸುತ್ತಿದ್ದರು.
ಸಾಲ ಮರುಪಾವತಿ ನೆಪದಲ್ಲಿ ಹೆಚ್ಚು ಹಣಕ್ಕೆ ಬೇಡಿಕೆ ಇರಿಸಿ, ಕೊಡದಿದ್ದರೆ ಸಾಲಗಾರರ ಮೊಬೈಲ್‌ನಲ್ಲಿರುವ ಸ್ನೇಹಿತರ ನಂಬರ್‌ಗಳು, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಸ್ನೇಹಿತರಿಗೆ ಸಾಲಗಾರರನ ಹೆಸರಿನಲ್ಲಿ ಸುಳ್ಳು ಆರೋಪಗಳು ಮತ್ತು ಅಶ್ಲೀಲ ನಿಂದನೆ ಮತ್ತು ಎಡಿಟ್ ಮಾಡಿದ ವೀಡಿಯೋಗಳನ್ನು ಟ್ಯಾಗ್ ಮಾಡಿ ಮಾನಕ್ಕೆ ಧಕ್ಕೆ ತರುತ್ತಿದ್ದರು. ಕೆಲವರು ಹೆಚ್ಚುವರಿ ಹಣ ಕೊಟ್ಟರೆ, ಇನ್ನು ಕೆಲವರು ಪೊಲೀಸ್ ಠಾಣೆ ಮೊರೆ ಹೊಗುತ್ತಿದ್ದರು.
ನಿರುದ್ಯೋಗಿಗಳ ಹೆಸರಿನಲ್ಲಿ ಕಂಪೆನಿ :
ಪ್ರಾಥಮಿಕ ಮಾಹಿತಿಗಳ ಪ್ರಕಾರ ಚೀನ ಮೂಲದ ಲಿಯು ವಿಜೆನ್, ಲಿನ್ ಜೂಜುನ್, ಜಿನ್‌ಗ್ಲಿ, ಶುಫ್ಯಾನ್ ಎಂಬವರು ಭಾರತದಲ್ಲಿ ನಿರುದ್ಯೋಗಿ ಯುವಕರಿಗೆ ವಿವಿಧ ಮಾರ್ಗಗಳ ಮೂಲಕ ಉದ್ಯೋಗದ ಆಮಿಷವೊಡ್ಡಿ ಅವರ ಹೆಸರಿನಲ್ಲಿ ನಕಲಿ ಕಂಪೆನಿಗಳು ತೆರೆದು, ಅವರನ್ನೇ ಎಚ್‌ಆರ್ ಮ್ಯಾನೇಜರ್, ಟೀಂ ಲೀಡರ್‌ಗಳನ್ನಾಗಿ ನೇಮಿಸಿದ್ದಾರೆ. ಬಳಿಕ ಬ್ಯಾಂಕ್‌ಗಳಲ್ಲಿ ಅವರ ಹೆಸರಿನಲ್ಲಿಯೇ ಖಾತೆಗಳನ್ನು ತೆರೆದು, ಅವರಿಗೆ ತಿಳಿಯದಂತೆ ಸಾಫ್ಟ್ವೇರ್ ಮೂಲಕ ವಂಚನೆ ಹಣವನ್ನು ಆ ಖಾತೆಗಳಿಗೆ ಜಮೆ ಮಾಡಿಸಿಕೊಂಡು, ಬಳಿಕ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಜತೆಗೆ ಈ ಆ್ಯಪ್ ಮತ್ತು ಕಂಪೆನಿಗಳ ಉದ್ಯೋಗಿಗಳ ಹೆಸರಿನಲ್ಲಿ ಭಾರತೀಯ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ರೋಮಿಂಗ್ ಕಾಲ್‌ಗಳ ಮೂಲಕ ಸಾಲಗಾರರಿಂದ ಒಟಿಪಿ ಪಡೆದು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರಕ್ಕೆ ವರದಿ :
ಚೀನ ಮೂಲದ ಆರೋಪಿಗಳು ಭಾರತದಲ್ಲಿ ತಾವು ಸೃಷ್ಟಿಸಿದ ಕಂಪೆನಿಗಳ ನಿರ್ದೇಶಕರು ಮತ್ತು ಸಿಬಂದಿ ಜತೆಗೆ ಸಂವಹನ ಮಾಡಲು “ಡಿಂಗ್‌ಟಾಕ್’ ಎಂಬ ಆ್ಯಪ್ ಬಳಸುತ್ತಿದ್ದಾರೆ. ಜತೆಗೆ ಪ್ರತ್ಯೇಕವಾಗಿ ಗ್ರಾಹಕರ ವಾಟ್ಸ್‌ಆ್ಯಪ್ ಗ್ರೂಪ್ ಸೃಷ್ಟಿಸಿಕೊಂಡು ಅವ್ಯವಹಾರ ನಡೆಸುತ್ತಿರುವುದು ಗೊತ್ತಾಗಿದೆ. ಈ ಎಲ್ಲ ಮಾಹಿತಿಯನ್ನು ಸಂಗ್ರಹಿಸಿರುವ ನಗರ ಪೊಲೀಸರು ಕೇಂದ್ರ ಗುಪ್ತಚರ ಇಲಾಖೆ ಸಂಪೂರ್ಣ ವರದಿ ಸಲ್ಲಿಸಿದ್ದಾರೆ.
- ಮೋಹನ್ ಭದ್ರಾವತಿ