ತನ್ನ ದಾಖಲೆಗಳಲ್ಲಿ ಅರುಣಾಚಲದ ಆರು ಸ್ಥಳಗಳ ಹೆಸರು ಬದಲಿಸಿಕೊಳ್ಳುವ ಮೂಲಕ ಚೀನ ತನ್ನ ಈಗೋ ತಣಿಸಿಕೊಳ್ಳುತ್ತಿದೆ. ಅದರ ಬಗ್ಗೆ ಭಾರತ ಹೆದರಬಾರದು. ತಕ್ಕ ತಿರುಗೇಟು ನೀಡಲು ಸಿದ್ಧವಾಗಿರಬೇಕು.
ದಲೈಲಾಮಾರ ತವಾಂಗ್ ಭೇಟಿ ಪ್ರತಿಭಟಿಸಿ ಚೀನ ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ತನ್ನದೇ ಹೆಸರು ಕೊಡುವುದರೊಂದಿಗೆ ಭಾರತ -ಚೀನ ಗಡಿ ವಿವಾದ ಹೊಸ ಆಯಾಮ ಪಡೆದುಕೊಂಡಿದೆ. ಟಿಬೆಟ್ ಬಳಿಕ ತವಾಂಗ್ ಬೌದ್ಧರ ಪರಮೋಚ್ಚ ಧಾರ್ಮಿಕ ಕೇಂದ್ರ. ಬೌದ್ಧ ಧರ್ಮಗುರು ಅಲ್ಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ ಆ ಬೌದ್ಧ ಧರ್ಮಗುರು ದಲೈಲಾಮಾ ಎನ್ನುವುದೇ ಚೀನದ ಕಣ್ಣು ಕೆಂಪಗಾಗಿಸಿದ್ದು. ಸ್ವತಂತ್ರ ಟಿಬೆಟ್ ಹಕ್ಕನ್ನು ಪ್ರತಿಪಾದಿಸುತ್ತಿರುವ ದಲೈಲಾಮಾಗೆ ಭಾರತ ಆಶ್ರಯ ಕೊಟ್ಟದ್ದನ್ನೇ ಚೀನಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಅವರಿಗೆ ಮುಕ್ತವಾಗಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕೊಟ್ಟರೆ ಸಹಿಸುವುದೆಂತು? ಹೀಗಾಗಿ ದಲೈಲಾಮಾ ಅರುಣಾಚಲ ಭೇಟಿ ಸುದ್ದಿ ಕಿವಿಗೆ ಬಿದ್ದ ಕೂಡಲೇ ಚೀನ ತಕರಾರು ಶುರುವಾಗಿತ್ತು. ಅದನ್ನು ತಡೆಯಲು ನಾನಾ ತಂತ್ರಗಳನ್ನು ಅನುಸರಿಸಿತು. ಭಾರತ ಇದಕ್ಕೆ ಕ್ಯಾರೇ ಎನ್ನದ ಕಾರಣ ಕೆರಳಿ ಈಗ ತನ್ನ ಅಧಿಕೃತ ದಾಖಲೆಗಳಲ್ಲಿ ಅರುಣಾಚಲ ಪ್ರದೇಶದ ಆರು ಸ್ಥಳಗಳ ಹೆಸರು ಬದಲಿಸಿದೆ. ದಲೈಲಾಮಾ ಬರೀ ಧಾರ್ಮಿಕ ಚಟುವಟಿಕೆ ಮಾಡುತ್ತಿಲ್ಲ, ಜತೆಗೆ ಟಿಬೆಟ್‌ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಚೀನದ ಆರೋಪ.
ಚೀನ ವಿವಾದಿತ ಸ್ಥಳಗಳಿಗೆ ತನ್ನದೇ ಹೆಸರು ಕೊಡುವುದು ಇದೇ ಮೊದಲೇನಲ್ಲ. ದಕ್ಷಿಣ ಚೀನ ಸಮುದ್ರದಲ್ಲಿರುವ ಪ್ಯಾರಾಸೆಲ್ ದ್ವೀಪ ಮತ್ತು ಸಾøಟಿ ದ್ವೀಪಗಳನ್ನು ಕ್ಸಿಶ ದ್ವೀಪ ಮತ್ತು ನನ್ಶ ದ್ವೀಪ ಎಂದು ಗುರುತಿಸಿಕೊಂಡಿದೆ. ಅಂತೆಯೇ ಜಪಾನ್ ಜತೆಗೆ ಕಿತ್ತಾಡುತ್ತಿರುವ ಸೆನ್‌ಕಕು ದ್ವೀಪಕ್ಕೆ ಡಿಯಾಯೊ ದ್ವೀಪ ಎಂದು ಹೆಸರಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಭಾಗಕ್ಕೆ ಅಕ್ಸಾಯ್ ಚಿನ್ ಎಂಬ ಹೆಸರಿಟ್ಟಿರುವುದು ಕೂಡ ಚೀನವೇ. ಹೀಗೆ ಯಾವ ವಿವಾದಿತ ಪ್ರದೇಶ ತನ್ನದೆಂದು ಚೀನ ಹೇಳುತ್ತಿದೆಯೋ ಅದಕ್ಕೆಲ್ಲ ತನ್ನದೇ ಸಂಸ್ಕೃತಿಗೊಪ್ಪುವ ಹೆಸರಿಟ್ಟು ಈ ಮೂಲಕ ಸಾಂಸ್ಕೃತಿಕವಾಗಿಯೂ ಆ ಭಾಗ ತನ್ನದು ಎಂದು ಸಾಧಿಸುವ ಪ್ರಯತ್ನ ಮಾಡುತ್ತಿದೆ. ಅರುಣಾಚಲ ಪ್ರದೇಶವನ್ನೇ ಚೀನ ದಕ್ಷಿಣ ಟಿಬೆಟ್ ಎಂದು ಗುರುತಿಸುತ್ತದೆ. ಇಂಥ ವಿವಾದಗಳು ತಕ್ಷಣ ಮುಗಿಯವು ಎನ್ನುವುದು ಚೀನಕ್ಕೆ ಗೊತ್ತಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿವಾದವನ್ನು ಪ್ರಸ್ತಾವಿಸುವ ಸಂದರ್ಭ ಬಂದರೆ ಅನೇಕ ವರ್ಷಗಳಿಂದ ಸಾಂಸ್ಕೃತಿಕವಾಗಿ ಈ ಪ್ರದೇಶ ತನ್ನದು, ಅಲ್ಲಿನ ಜನರು ತನ್ನ ಸಂಸ್ಕೃತಿಯ ಭಾಗವಾಗಿದ್ದಾರೆ ಎಂದು ಪ್ರತಿಪಾದಿಸುವ ತಂತ್ರವಿದು.
1914 ಸಿಮ್ಲಾ ಒಪ್ಪಂದದಂತೆ ಮ್ಯಾಕ್‌ವೊಹನ್ ಲೈನ್ ಎಂಬ ಗಡಿರೇಖೆಯೊಂದನ್ನು ಗುರುತಿಸಲಾಗಿದ್ದು, ಇದರ ಪ್ರಕಾರ ತವಾಂಗ್ ಭಾರತಕ್ಕೆ ಸೇರುತ್ತದೆ. 1951ರ ತನಕ ಇಲ್ಲಿರುವ ಬೌದ್ಧ ಧಾರ್ಮಿಕ ಕೇಂದ್ರಗಳು ಟಿಬೆಟ್‌ನ ಬೌದ್ಧ ಸನ್ಯಾಸಿಗಳ ನಿಯಂತ್ರಣದಲ್ಲಿದ್ದವು. 1951ರಲ್ಲಿ ಸೇನೆ ಇಡೀ ತವಾಂಗನ್ನು ಭಾರತಕ್ಕೆ ಸೇರಿಸಿಕೊಂಡಿದೆ. ಚೀನದ ಪ್ರತಿನಿಧಿಯೂ ಸಿಮ್ಲಾ ಒಪ್ಪಂದಕ್ಕೆ ಅಂಕಿತ ಹಾಕಿದ್ದರೂ ಈಗ ಚೀನ ತನ್ನ ಪ್ರತಿನಿಧಿಗೆ ಈ ಒಪ್ಪಂದ ಸಮ್ಮತವಿರಲಿಲ್ಲ ಎಂಬ ತಗಾದೆ ತೆಗೆದಿದೆ. 1962ರ ಯುದ್ಧದಲ್ಲಿ ಭಾರತ ಸೋತ ಬಳಿಕ ಅರುಣಾಚಲ ಪ್ರದೇಶದ ಬಹುಭಾಗವನ್ನು ಚೀನ ವಶಪಡಿಸಿಕೊಂಡಿತ್ತು. ಅನಂತರ ಅಲ್ಲಿಂದ ಹಿಂದೆಗೆದಿದ್ದರೂ ಕೆಲವು ಪ್ರದೇಶಗಳನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇಡೀ ಅರುಣಾಚಲ ಪ್ರದೇಶವನ್ನೇ ಕಬಳಿಸುವ ಉತ್ಸಾಹದಲ್ಲಿ ಮ್ಯಾಕ್‌ವೊàಹನ್ ಗಡಿರೇಖೆಯೇ ಇಲ್ಲ ಎಂಬ ಮೊಂಡು ವಾದ ಮಂಡಿಸುತ್ತಿದೆ. 1980ರಿಂದೀಚೆಗೆ ತವಾಂಗ್‌ನ್ನು ಕೊಡಲೇಬೇಕೆಂದು ಪಟ್ಟು ಹಿಡಿದಿದೆ. ಹೀಗಾಗಿ ತವಾಂಗ್‌ನಲ್ಲಿ ಭಾರತ ನಡೆಸುವ ಯಾವುದೇ ಚಟುವಟಿಕೆಯನ್ನು ಉಗ್ರವಾಗಿ ವಿರೋಧಿಸುತ್ತಿದೆ. ದಲೈಲಾಮಾ ತವಾಂಗ್ ಭೇಟಿಯ ಬೆನ್ನಿಗೆ ಭಾರತ ಮತ್ತು ಚೀನ ನಡುವೆ ಇನ್ನೊಂದು ಯುದ್ಧವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ತಕ್ಕಂತೆ ಚೀನ ಅಧ್ಯಕ್ಷ ತನ್ನ ಸೇನಾಪಡೆಗೆ ಸದಾ ಯುದ್ಧ ಸನ್ನದ್ಧವಾಗಿರಬೇಕೆಂಬ ಸೂಚನೆಯನ್ನು ನೀಡಿದ್ದಾರೆ. ಹಾಗೆಂದು ಚೀನ ಏಕಾಏಕಿ ಯುದ್ಧ ಘೋಷಿಸಿ ಬಿಡುವ ಸಾಧ್ಯತೆಯಿಲ್ಲ. ಈಗ ಜಾಗತಿಕ ಪರಿಸ್ಥಿತಿಯೂ ಬಹಳ ಸೂಕ್ಷ್ಮವಾಗಿರುವುದರಿಂದ ಯುದ್ಧವೇನಾದರೂ ಸಂಭವಿಸಿದರೆ ಅದರ ಪರಿಣಾಮ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳಲಿದೆ ಎಂದು ವಾಸ್ತವ ಚೀನಕ್ಕೂ ಗೊತ್ತಿದೆ. ಹಿಂದಿನಂತೆ ಗಡಿಯಲ್ಲಿ ಒಂದಿಷ್ಟು ತಂಟೆ ಶುರು ಮಾಡಬಹುದು. ಭಾರತದ ಜತೆಗೆ ಇಂತಹ ಚಿಕ್ಕಪುಟ್ಟ ಕಿರಿಕಿರಿಗಳನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಅದಕ್ಕೆ ನಮ್ಮ ಸೇನೆ ಮತ್ತು ಸರಕಾರ ತಕ್ಕ ಉತ್ತರವನ್ನೂ ನೀಡಿದೆ. ಹೆಸರು ಬದಲಾವಣೆ ತನ್ನ ಸಾರ್ವಭೌಮತೆಯನ್ನು ತೋರಿಸಿಕೊಳ್ಳುವ ಒಂದು ಚಪಲ ಅಷ್ಟೆ. ಆ ಮೂಲಕ ಚೀನ ತನ್ನ ಈಗೋ ಅನ್ನು ತಣಿಸಿಕೊಳ್ಳುತ್ತಿದೆ.