ಇಸ್ಲಾಮಾಬಾದ್/ಬೀಜಿಂಗ್: ಚೀನ ಪಾಕಿಸ್ತಾನಕ್ಕೆ ತನ್ನ ಸೇನೆಯನ್ನು ಕಳುಹಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಅನ್ವಯ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆಗಾಗಿ ಈ ಕ್ರಮ ಎಂದು ಹೇಳಲಾಗುತ್ತಿದೆ.
ಶ್ರೀಲಂಕೆಯ ಹಂಬಂತೋಟ ಬಂದರಿನಲ್ಲಿ ಗುಪ್ತಚರ ಹಡಗು ತಂಗಿರುವಂತೆಯೇ ಈ ಸುದ್ದಿ ಹೊರಬಿದ್ದಿರುವುದು ಗಮನಾರ್ಹವಾಗಿದೆ.
ಪಾಕಿಸ್ತಾನದಲ್ಲಿ 60 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಹೂಡಿಕೆಯನ್ನು ಚೀನ ಮಾಡಿದೆ.
ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಪಾಕಿಸ್ತಾನ ಚೀನ ಸರ್ಕಾರ ಹೇಳಿದಂತೆಯೇ ಕೇಳುವ ಸಾಧ್ಯತೆಯೇ ಅಧಿಕ. ಅದಕ್ಕೆ ಪೂರಕವಾಗಿ ಡ್ರ್ಯಾಗನ್ ಸೇನೆಯ ನೆಲೆಗಳನ್ನು ಸ್ಥಾಪಿಸಲು ಅನುಮತಿ ನೀಡಲಿದೆ ಎನ್ನಲಾಗುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚೀನದ ಪ್ರತಿನಿಧಿಗಳು ಪಾಕಿಸ್ತಾನ ಸರ್ಕಾರದ ಜತೆಗೆ ಮಾತುಕತೆಯನ್ನೂ ನಡೆಸಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಮನ್ನಣೆ ನೀಡಿರುವ ಚೀನ ಅಲ್ಲಿಯೂ ತನ್ನ ನೆಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಆದರೆ, ಡ್ರ್ಯಾಗನ್‌ನ ಬುದ್ಧಿ ಅರಿತಿರುವ ತಾಲಿಬಾನ್ ಆಡಳಿತ ಭಾರತದಂತೆಯೇ ಸ್ವತಂತ್ರ ವಿದೇಶಾಂಗ ನೀತಿ ಹೊಂದಲು ಮುಂದಾಗಿದೆ. ಜತೆಗೆ ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಲೂ ಮುಂದಾಗಿದೆ.