Advertisement

ತಾತ್ಕಾಲಿಕವಾಗಿ ವಿದೇಶಿ ವೀಸಾ ನಿಷೇಧಿಸಿದ ಚೀನ

09:39 AM Mar 28, 2020 | Sriram |

ಬೀಜಿಂಗ್‌: ಒಂದು ಹಂತದಲ್ಲಿ ಕೋವಿಡ್‌ 19 ಮಾರಿಯನ್ನು ಹೊರಗಟ್ಟಿದ್ದೇನೆ ಎಂಬ ಆತ್ಮವಿಶ್ವಾಸದಲ್ಲಿರುವ ಚೀನಾ, ಬಾಗಿಲಲ್ಲಿ ಹೋದ ಪಿಶಾಚಿ ಗವಾಕ್ಷಿಯಲ್ಲಿ ಬಾರದಂತೆ ಎಚ್ಚರ ವಹಿಸಲಾರಂಭಿಸಿದೆ.

Advertisement

ಎಲ್ಲಾ ವಿದೇಶಿ ಪ್ರವಾಸಿಗರ ವೀಸಾ ಅಥವಾ ನಿವಾಸ ಪರವಾನಗಿ ಹೊಂದಿರುವ ವೀಸಾಗಳನ್ನು ತಾತ್ಕಾಲಿಕವಾಗಿ ಚೀನಾ ಸರಕಾರ ನಿಷೇಧಿಸಿದೆ. ಮಾತ್ರವಲ್ಲ, ದೇಶೀಯ ವಿಮಾನಗಳಿಗೂ ವಾರಕ್ಕೆ ಒಂದು ಬಾರಿಯಷ್ಟೇ ಹಾರಾಡಲು ಅನುಮತಿ ನೀಡಿದೆ. ವಿಮಾನಗಳಲ್ಲಿ ಶೇ. 75 ಕ್ಕಿಂತ ಹೆಚ್ಚ ಜನರನ್ನು ತುಂಬಬಾರದೂ ಎಂದಿದೆ. ಇದೊಂದು ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ತಂತ್ರವೂ ಹೌದು.

55 ಹೊಸ ಪ್ರಕರಣಗಳು
ಮೂರು ದಿನಗಳ ಬಳಿಕ ಹೊಸ 55 ಪ್ರಕರಣಗಳು ವರದಿಯಾಗಿವೆ. ಅವುಗಳ ಪೈಕಿ 1 ಚೀನ ಪ್ರಜೆಯದ್ದಾಗಿದೆ. ಉಳಿದವರು ವಿದೇಶಿಯರು. ಹಾಗಾಗಿ ವೀಸಾ ತಡೆ ವಿದೇಶಿ ಪ್ರಜೆಗಳ ಪ್ರವೇಶವನ್ನು ತಡೆಯಲು ನಿರ್ಧರಿಸಿದೆ. ಜತೆಗೆ ಚೀನದಲ್ಲಿ ನಿವಾಸ ಹೊಂದಿರುವ ವಿದೇಶಿಗರಿಗೂ ಇದು ಅನ್ವಯ. ಆದರೆ ರಾಜತಾಂತ್ರಿಕರಿಗೆ ಅಥವಾ “ಸಿ’ ವೀಸಾ ಹೊಂದಿರುವವರಿಗೆ (ವಿಮಾನ ಸಿಬ್ಬಂದಿ) ಅನ್ವಯಿಸದು. ತುರ್ತು ಮತ್ತು ಮಾನವೀಯ ಅಗತ್ಯಗಳು ಹೊಂದಿರುವವರು ಅಥವಾ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ವಿನಾಯಿತಿಗಾಗಿ ಅರ್ಜಿ ಸಲ್ಲಿಸಬಹುದು.

ಈಗಿನ ಪರಿಸ್ಥಿತಿ ಏನು?
ಚೀನದಲ್ಲಿ ಈ ವೈರಸ್‌ ಹೊರಹೊಮ್ಮಿದ್ದರೂ, ಇದು ಈಗ ಯುಎಸ್‌ ಗಿಂತ ಕಡಿಮೆ ಪ್ರಕರಣಗಳನ್ನು ಹೊಂದಿದೆ. ಇಟಲಿ ಮತ್ತು ಸ್ಪೇನ್‌ ಗಿಂತ ಕಡಿಮೆ ಪ್ರಮಾಣದ ಸಾವುಗಳನ್ನು ಹೊಂದಿದೆ. ಚೀನದಲ್ಲಿ 81,340 ಪ್ರಕರಣಗಳು ಮತ್ತು 3,292 ಸಾವುಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ. ಒಟ್ಟಾರೆಯಾಗಿ, ದೃಢಪಡಿಸಿದ 565 ಪ್ರಕರಣಗಳು ವಿದೇಶಿಗರಲ್ಲಿ ಕಂಡುಬಂದಿದೆ. ವುಹಾನ್‌ನಲ್ಲಿ ಜನವರಿಯಲ್ಲಿ ಪ್ರಾರಂಭವಾದ ಲಾಕ್‌ಡೌನ್‌ ಎಪ್ರಿಲ್‌ 8ರಂದು ಯಥಾಸ್ಥಿತಿಗೆ ಬರಲಿದೆ.

ನಲುಗಿದ ಅಮೆರಿಕ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ್ಕೆ ಕೋವಿಡ್‌ 19 ತಡೆಯಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ 19 ವೈರಸ್‌​ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕವು ಚೀನ ಹಾಗೂ ಇಟಲಿಯನ್ನು ಹಿಂದಿಕ್ಕಿದೆ. ಇದು ಅಲ್ಲಿನ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾವು ಸಂಭವಿಸಬಹುದೆಂಬ ಆತಂಕ ಎದುರಾಗಿದೆ. ಸದ್ಯ ಇಟಲಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿನ ಸಂಖ್ಯೆಯಲ್ಲಿ ಸ್ಪೇನ್‌​ ಚೀನವನ್ನು ಹಿಂದಿಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next