Advertisement

ಚೀನ ಆಗಸದಲ್ಲಿ ಒಂದೇ ದಿನ 3 ಸೂರ್ಯೋದಯ!

12:07 PM Nov 03, 2015 | sudhir |

ಬೀಜಿಂಗ್‌: ಭೂಮಿಯ ಎಲ್ಲೆಡೆ ಹುಟ್ಟುವುದು ಒಬ್ಬನೇ ಸೂರ್ಯ. ಆದರೆ, ಅಪರೂಪದ ವಿಸ್ಮಯವೆಂಬಂತೆ ಚೀನದ ಆಕಾಶದಲ್ಲಿ ಶನಿವಾರ 3 ಸೂರ್ಯ ಉದಯಿಸಿದ್ದವು!

Advertisement

“ಮಿಥ್ಯ ಸೂರ್ಯ’, “ಸನ್‌ ಡಾಗ್ಸ್‌’ ಅಂತೆಲ್ಲ ಕರೆಯಲ್ಪಡುವ ಈ ವಿಚಿತ್ರ ವಿದ್ಯಮಾನಕ್ಕೆ ರಷ್ಯಾ ಗಡಿಗೆ ಹೊಂದಿಕೊಂಡ ಚೀನದ “ಮೊಹೆ’ ನಗರ ಸಾಕ್ಷಿಯಾಗಿತ್ತು. ಮೊಹೆಯ ಜನ ಬೆಳಗ್ಗೆದ್ದು ನಾಲ್ಕಾರು ಬಾರಿ ಕಣ್ಣುಜ್ಜಿಕೊಂಡು ನೋಡಿದಾಗ ಏಕಕಾಲದಲ್ಲಿ 3 ಸೂರ್ಯ ಕಾಣಿಸಿಕೊಂಡಿದ್ದಾನೆ. ಬೆಳಗ್ಗೆ 6.30ರಿಂದ 9.30ರವರೆಗೆ ಈ ವಿದ್ಯಮಾನ ಜರುಗಿದೆ.

ಏನಿದು ಮಿಥ್ಯ ಸೂರ್ಯ?: ಇದೊಂದು ಬೆಳಕಿನ ಮಾಯೆ. ಸೂರ್ಯನ ಬೆಳಕು ಅತ್ಯುನ್ನತ ಮಂಜಿನ ಗಡ್ಡೆಗಳ ಮೇಲೆ ಬಿದ್ದು ಪ್ರತಿಫ‌ಲನ ಹೊಂದುತ್ತವೆ. ಈ ಪ್ರತಿಫ‌ಲಿತ ಬೆಳಕು ಆಕಾಶದ ಶುಭ್ರ ಮೋಡದ ನಡುವೆ ಪ್ರಜ್ವಲಿಸುತ್ತದೆ. ಡಾಕ್ಸಿ ಯಾಂಗ್ಲಿಂಗ್‌ ಪ್ರಾಂತ್ಯದ ಮೊಹೆ, ಮಂಜಿನ ಬೆಟ್ಟಗಳಿಂದ ಕೂಡಿದೆ.

ದೃಶ್ಯ ಹೇಗಿತ್ತು?: ಮೊಹೆ ಆಗಸದಲ್ಲಿ ಮೂಡಿದ್ದ ನೈಜ ಸೂರ್ಯನ ಎಡ, ಬಲಗಳಲ್ಲಿ 2 ಪ್ರಕಾಶಮಾನ ಮಿಥ್ಯ ಸೂರ್ಯಗಳು ಮೂಡಿದ್ದವು. “ಇಂಥ ವಿದ್ಯಮಾನದಲ್ಲಿ ಮಿಥ್ಯ ಸೂರ್ಯ ಪ್ರಕಾಶಮಾನವಾಗಿಯೂ ಹೊಳೆಯ ಬಹುದು. ಕೆಲವು ಬಾರಿ ಕಾಮನಬಿಲ್ಲಿನ ಬಣ್ಣಗಳನ್ನೂ ಹೊಮ್ಮಿಸಬಹುದು. ವಿರಳಾತೀವಿರಳವೆಂಬಂತೆ ಹಿಮಬೆಟ್ಟಗಳ ಪ್ರದೇಶಗಳಲ್ಲಿ ಹುಣ್ಣಿಮೆ ದಿನಗಳಲ್ಲೂ ರಾತ್ರಿ ವೇಳೆ ಮಿಥ್ಯ ಚಂದ್ರನ ದರ್ಶನವಾಗುತ್ತದೆ’ ಎಂದು ಹವಾಮಾನ ತಜ್ಞ ಗ್ರಹಾಂ ಮಾಗ್ಡೆ ತಿಳಿಸಿದ್ದಾರೆ. ಚೀನ ಹವಾಮಾನ ಇಲಾಖೆ ಮಿಥ್ಯ ಸೂರ್ಯನ ಚಿತ್ರಗಳನ್ನು, ವಿಡಿಯೊ ರೂಪದಲ್ಲಿ ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next