ನವದೆಹಲಿ: ಗಡಿ ವಿಚಾರವಾಗಿ ಭಾರತದ ಜತೆಗೆ ಕ್ಯಾತೆ ತೆಗೆಯುತ್ತ, ಜಗತ್ತಿನ ಮುಂದೆ ಸ್ನೇಹಕ್ಕಾಗಿ ಕೈಚಾಚುತ್ತಿರುವಂತೆ ಸದಾ ನಾಟಕವಾಡುವ ಚೀನ, ಭಾನುವಾರ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಗೌಪ್ಯ ಸಭೆಗೆ ಗೈರಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಅಧ್ಯಕ್ಷತೆಯಲ್ಲಿ ನವೆಂಬರ್‌ನಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಅದಕ್ಕೂ ಮುಂಚೆ ಅಧಿಕಾರಿಗಳ ಮಟ್ಟದಲ್ಲಿ ಗೌಪ್ಯ ಸಭೆಗಳನ್ನು ನಡೆಸಲಾಗುತ್ತಿದೆ.
ಅದರಂತೆ ಅರುಣಾಚಲ ಪ್ರದೇಶದಲ್ಲಿಯೂ ಭಾನುವಾರ ಸಭೆ ನಿಯೋಜಿಸಲಾಗಿತ್ತು. 50ಕ್ಕೂ ಅಧಿಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಚೀನ ಭಾಗವಹಿಸಿರಲಿಲ್ಲ. ಅಧಿಕೃತವಾಗಿ ಚೀನ ಸಭೆಯನ್ನು ವಿರೋಧಿಸಿತ್ತೇ ಎಂಬುದು ಇನ್ನೂ ಖಾತರಿಯಾಗಿಲ್ಲ.
ಅರುಣಾಚಲ ಪ್ರದೇಶವನ್ನು ಟಿಬೆಟ್‌ನ ಭಾಗವೆಂದು ಚೀನ ಹೇಳುತ್ತಲೇ ಇದ್ದು, ಭಾರತ ಈ ಪ್ರದೇಶ ತನ್ನ ಅವಿಭಜಿತ ಅಂಗವೆಂದು ಪುನರುಚ್ಚರಿಸುತ್ತಲೇ ಇದೆ. ಅದೇ ಅರುಣಾಚಲದಲ್ಲಿಯೇ, ಚೀನದ ಗೈರುಹಾಜರಿಗೆ ಕಾರಣವಿರಬಹುದೆಂದು ಮೂಲಗಳು ತಿಳಿಸಿವೆ.
ಇಟಾನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಅಲ್ಲಿನ ಬೌದ್ಧ ಮಠಕ್ಕೂ ಭೇಟಿ ನೀಡಿದ್ದರು.