ನವದೆಹಲಿ:ಸಿಕ್ಕಿಂ ಗಡಿ ವಿವಾದದ ವಿಚಾರದಲ್ಲಿ ಭಾರತದ ಜತೆ ಯಾವುದೇ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿರುವ ಚೀನಾ ಈ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಹೊಣೆಗಾರಿಕೆ ಭಾರತದ್ದು ಹಾಗಾಗಿ ಚೆಂಡು ಈಗ ಭಾರತದ ಅಂಗಳದಲ್ಲಿದೆ ಎಂದು ಹೇಳುವ ಮೂಲಕ ಸಂಧಾನ ಬೇಕೋ ಅಥವಾ ಯುದ್ಧ ಬೇಕೋ ಆಯ್ಕೆ ನಿಮ್ಮದು ಎಂಬುದಾಗಿ ಹೇಳಿದೆ.
ಸಿಕ್ಕಿಂನ ಡೋಕ ಲಾ ಸಂಗಮ ಪ್ರದೇಶದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಮೂರು ವಾರಗಳೇ ಕಳೆದಿದ್ದು, ಉಭಯ ರಾಷ್ಟ್ರಗಳು ಪರಿಸ್ಥಿತಿ ನಿಯಂತ್ರಿಸದೇ ಇದ್ದಲ್ಲಿ ಯುದ್ಧ ನಡೆಯುವ ಸಾಧ್ಯತೆಯೇ ಹೆಚ್ಚು ಎಂದು ಭಾನುವಾರ ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಚೀನಾದ ಅಧಿಕೃತ ಮಾಧ್ಯಮ ಪ್ರಕಟಿಸಿತ್ತು.
ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಝಾವೊಹುಯ್ , ಗಡಿ ವಿವಾದದ ಬಿಕ್ಕಟ್ಟು ಶಮನಗೊಳಿಸುವ ಮಾರ್ಗೋಪಾಯ ಭಾರತ ಸರ್ಕಾರವೇ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಗಡಿ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳದೇ ಹೋದಲ್ಲಿ ಯುದ್ಧ ಅನಿವಾರ್ಯವಾಗಬಹುದು ಎಂದು ಚೀನಿ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಲುವೋ ಅವರನ್ನು ಪ್ರಶ್ನಿಸಿದಾಗ, ಈ ಆಯ್ಕೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಆಯ್ಕೆ(ಮಿಲಿಟರಿ ಬಲಪ್ರದರ್ಶನ ಬೇಕೆ, ಬೇಡವೇ) ನಿಮ್ಮ ಸರ್ಕಾರದ ನೀತಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಭಾರತ ದೋಕ ಲಾ ಪ್ರದೇಶದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಪ್ರಸ್ತುತ ಉದ್ಭವಿಸಿರುವ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಸಿಗಲಿ ಎಂಬುದು ಚೀನಾ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಲುವೋ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.