ಚಾಂಗ್‌ಝೂ: ಚೀನ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನ ಲ್‌ನಲ್ಲಿ ಪಿ.ವಿ. ಸಿಂಧು, ಕೆ.ಶ್ರೀಕಾಂತ್ ಜಯ ದಾಖಲಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ವನಿತಾ ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಆಸ್ ಬಮ್ರುಂಪಾನ್ ವಿರುದ್ಧ 21-23, 21-13, 21-18 ಅಂತರದ ಗೆಲುವು ಸಾಧಿಸಿದರು. ಆರಂಭಿಕ ಗೇಮ್ ಕಳೆದುಕೊಂಡ ಸಿಂಧು,ಬಳಿಕ ಎಚ್ಚ ರಿಕೆಯ ಆಟವಾಡುವ ಮೂಲಕ ಗೆಲುವಿನ ಲಯ ಕಂಡುಕೊಂಡರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್-ಥಾಯ್ಲೆಂಡ್‌ನ ಸುಪನ್ಯೂ ಅವಿಹಿಂಗ್ ಸಾ ನನ್ ನಡುವೆ ಗೆಲುವಿಗೆ ತೀವ್ರ ಪೈಪೋಟಿಯೇ ನಡೆಯಿತು. ಶ್ರೀಕಾಂತ್ 21-12, 15-21, 24-22 ಗೇಮ್‌ಗಳಿಂದ ಗೆದ್ದರು. ಮೊದಲ ಗೇಮ್ ನಲ್ಲಿ ಸುಲಭ ಜಯಗಳಿಸಿದ ಶ್ರೀಕಾಂತ್‌ಗೆ ಎರಡನೇ ಗೇಮ್‌ನಲ್ಲಿ ಎಡವಿದರು. ತೀವ್ರ ಪೈಪೋಟಿಯಿಂದ ಕೂಡಿದ ನಿರ್ಣಯಕ ಗೇಮ್‌ನಲ್ಲಿ ಶ್ರೀಕಾಂತ್‌ಗೆ ಅದೃಷ್ಟ ಒಲಿಯಿತು.
ಡಬಲ್ಸ್,ಮಿಶ್ರ ಡಬಲ್ಸ್ ಸೋಲು
ಡಬಲ್ಸ್,ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು ಎರಡನೇ ಸುತ್ತಿನಲ್ಲಿ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಜೋಡಿ ಅಗ್ರ ಶ್ರೇಯಾಂಕಿತ ಚೀನದ ಹೆಂಗ್ ಸಿವಿ-ಹಾಂಗ್ ಯೂಕ್ಯುಂಗ್ ವಿರುದ್ಧ 14-21, 11-21ರಿಂದ ಸೋತರೆ,ಎನ್.ಸಿಕ್ಕಿ ರೆಡ್ಡಿ- ಪ್ರಣವ್ ಜೆರಿ ಚೋಪ್ರಾ 6ನೇ ಶ್ರೇಯಾಂಕಿತ ಡೆನ್ಮಾರ್ಕ್ ಜೋಡಿ ವಿರುದ್ಧ ಸೋತರು. ಪುರು ಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಬಿ.ಸುಮೀತ್ ರೆಡ್ಡಿ ಜೋಡಿ ಚೆನ್ ಹಾಂಗ್ ಲಿಂಗ್-ವಾಂಗ್ ಚಿ-ಲೀನ್ ವಿರುದ್ಧ ಮುಗ್ಗ ರಿಸಿತು.