Advertisement

China Open Badminton: ಪ್ರಣಯ್‌, ಸೇನ್‌ಗೆ ಮೊದಲ ಸುತ್ತಿನ ಆಘಾತ

11:21 PM Sep 05, 2023 | Team Udayavani |

ಚಾಂಗ್‌ಜೂ (ಚೀನ): ಚೀನ ಓಪನ್‌ ಸೂಪರ್‌-1000 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ಆಘಾತಕಾರಿ ಆರಂಭ ಪಡೆದಿದೆ. ನೆಚ್ಚಿನ ಆಟಗಾರರಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಪ್ರಿಯಾಂಶು ರಾಜಾವತ್‌, ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಅವರಿಗೂ ಸೋಲೇ ಸಂಗಾತಿಯಾಯಿತು.

Advertisement

ಮೊನ್ನೆಯಷ್ಟೇ ವಿಶ್ವ ಚಾಂಪಿ ಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಂಭ್ರಮದಲ್ಲಿದ್ದ ಎಚ್‌.ಎಸ್‌. ಪ್ರಣಯ್‌ ಅವರನ್ನು ಮಲೇಷ್ಯಾದ 22ನೇ ರ್‍ಯಾಂಕಿಂಗ್‌ ಆಟಗಾರ ಎನ್‌ಜಿ ಝೆ ಯಾಂಗ್‌ 21-12, 13-21, 21-18 ಅಂತರದಿಂದ ಸೋಲಿಸಿದರು. ನಿರ್ಣಾಯಕ ಗೇಮ್‌ನ ಕೊನೆಯ 6 ನಿಮಿಷಗಳಲ್ಲಿ ಪ್ರಣಯ್‌ ದಿಟ್ಟ ಪ್ರತಿರೋಧ ತೋರಿದರೂ ಪ್ರಯೋಜನವಾಗಲಿಲ್ಲ.

ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿ ಯನ್‌ ಲಕ್ಷ್ಯ ಸೇನ್‌ ಅವರನ್ನು ಡೆನ್ಮಾರ್ಕ್‌ನ ಆ್ಯಂಡರ್ ಆ್ಯಂಟನ್ಸೆನ್‌ 23-21, 16-21, 21-9 ಅಂತರದಿಂದ ಪರಾಭವ ಗೊಳಿಸಿದರು. ಈ ಪಂದ್ಯ ಕೂಡ ತೀವ್ರ ಪೈಪೋಟಿಯಿಂದ ಕೂಡಿತ್ತು.

ಪ್ರಿಯಾಂಶು ರಾಜಾವತ್‌ ಇಂಡೋನೇಷ್ಯಾದ ಶೆಶರ್‌ ಹಿರೆನ್‌ ರುಸ್ತಾವಿಟೊ ವಿರುದ್ಧ 13-21, 24-26 ಅಂತರದ ಸೋಲನುಭವಿಸಿ ದರು. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಮೊದಲ ದಿನವೇ ಅಂತ್ಯಗೊಂಡಿತು.

ವನಿತಾ ಡಬಲ್ಸ್‌ನಲ್ಲಿ ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಆತಿಥೇಯ ನಾಡಿನ ಅಗ್ರ ಶ್ರೇಯಾಂಕದ ಚೆನ್‌ ಕ್ವಿಂಗ್‌ ಚೆನ್‌-ಜಿಯಾ ಯಿ ಫಾನ್‌ ಜೋಡಿಗೆ ಸಾಟಿಯಾಗಲಿಲ್ಲ. ಭಾರತದ ಜೋಡಿ 18-21, 11-21 ಅಂತರದ ಸೋಲಿಗೆ ಸಿಲುಕಿತು.

Advertisement

ಏಷ್ಯನ್‌ ಗೇಮ್ಸ್‌ ತಯಾರಿಗಾಗಿ ಪಿ.ವಿ. ಸಿಂಧು ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ ಈ ಕೂಟದಲ್ಲಿ ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿಗಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next