ಚಾಂಗ್‌ಝೂ (ಚೀನ): ಭಾರತದ ಉದಯೋನ್ಮುಖ ಶಟ್ಲರ್ ಮಾಳವಿಕಾ ಬನ್ಸೋಡ್ ಅವರು ಕಠಿನ ಹೋರಾಟದಲ್ಲಿ ತನಗಿಂತ ಉನ್ನತ ರ್‍ಯಾಂಕಿನ ಆಟಗಾರ್ತಿ ಕ್ರಿಸ್ಟಿ ಗಿಲ್ಮೋರ್ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಕೆಡಹಿ ಚೊಚ್ಚಲ ಬಾರಿ ಸೂಪರ್ 1000 ಚೀನ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.
43ನೇ ರ್‍ಯಾಂಕಿನ ಮಾಳವಿಕಾ ಅವರು ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದಿರುವ ಸ್ಕಾಟ್ಲೆಂಡಿನ 25ನೇ ರ್‍ಯಾಂಕಿನ ಗಿಲ್ಮೋರ್ ಅವರನ್ನು 21-17, 19-21, 21-16 ಗೇಮ್‌ಗಳಿಂದ ಕೆಡಹಿ ಮುನ್ನಡೆದರು.
ಸೂಪರ್ 1000 ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ನಾನು ಇದೆಇಈ ಮೊದಲ ಬಾರಿ ಆಡುತ್ತಿದ್ದೇನೆ. ಈ ಮೂಲಕ ನನ್ನ ಕನಸು ನನಸಾಗಿದೆ. ಇದು ಇಷ್ಟರವರೆಗೆ ನನ್ನ ಬಾಳ್ವೆಯ ಬಲುದೊಡ್ಡ ಸಾಧನೆ ಎಂದು ಪಂದ್ಯದ ಬಳಿಕ ಮಾಳವಿಕಾ ಹೇಳಿದರು.
ಕಣದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿ ಯಾಗಿರುವ ಮಾಳವಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ನಾಲ್ಕನೇ ಶ್ರೇಯಾಂಕದ ಜಪಾನಿನ ಅಕಾನೆ ಯಮಗುಚಿ ಅವರ ಸವಾಲನ್ನು ಎದುರಿಸಬೇಕಾಗಿದೆ. ಮಾಳವಿಕಾ ವಿರುದ್ಧ ಈ ಹಿಂದೆ ನಡೆದ ಎರಡು ಮುಖಾಮುಖೀಯಲ್ಲಿ ಯಮಗುಚಿ ಗೆಲುವು ಸಾಧಿಸಿದ್ದಾರೆ. ಆದರೆ ಒಂದು ಹೋರಾಟದಲ್ಲಿ ಮಾಳವಿಕಾ ತೀವ್ರ ಹೋರಾಟ ಸಂಘಟಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದರು. ಈ ಬಾರಿ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿ ಮಾಳವಿಕಾ ಇದ್ದಾರೆ.
ಒಳ್ಳೆಯ ಫಲಿತಾಂಶಕ್ಕಾಗಿ ಕಾಯುತ್ತೇನೆ. ನಾನೀಗ ಉತ್ತಮ ಫಾರ್ಮ್ನಲ್ಲಿದ್ದೇನೆ ಮತ್ತು ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗೆಲುವು ದಾಖಲಿ ಸಲು ಪ್ರಯತ್ನಿಸುತ್ತೇನೆ ಎಂದು ಮಾಳವಿಕಾ ಹೇಳಿದ್ದಾರೆ.