ಇಟಾನಗರ : ಗಡಿಯಲ್ಲಿ ತಗಾದೆ ತೆಗೆದು ಭಾರತಕ್ಕೆ ತೊಂದರೆ ನೀಡುವಲ್ಲಿ ಹಿನ್ನಡೆ ಅನುಭವಿಸಿದ ಚೀನಾ ಹೊಸ ಮಾರ್ಗದಲ್ಲಿ ಭಾರತವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎನ್ನುವ ಸಂಶಯ ಬಲವಾಗುತ್ತಿದೆ.
ಇದಕ್ಕೆ ಬಲವಾದ ಸಾಕ್ಷಿಯಾಗಿ ಸೋಮವಾರ ಅರುಣಾಚಲ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಅವರ ಬಳಿ ಚೀನಾದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹತ್ಯೆಯಾದ ಮೂವರು ಉಗ್ರರು ಎನ್‌ಎಸ್‌ಸಿಎನ್-ಕೆ(ವೈಎ)ಗೆ ಸೇರಿದವರು. ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ.
ಚೀನಾ ಈಶಾನ್ಯ ರಾಜ್ಯಗಳಲ್ಲಿ ಸಕ್ರೀಯವಾಗಿರುವ ಉಗ್ರರಿಗೆ ನೆರವು ನೀಡುತ್ತಿದೆಯೋ ಎನ್ನುವ ಸಂಶಯ ಈಗ ಬಲವಾಗತೊಡಗಿದೆ.
ಕಳೆದ ವಾರ ಅಸ್ಸಾಂ ರೈಫಲ್ಸ್ 46 ನ ಕಮಾಂಡಿಂಗ್ ಆಫೀಸರ್, ಅವರ ಪತ್ನಿ ಮತ್ತು ಮಗ ಮತ್ತು ನಾಲ್ವರು ಸೈನಿಕರನ್ನು ಉಗ್ರರು ಹೊಂಚು ದಾಳಿ ನಡೆಸಿ ಹತ್ಯೆಗೈದಿದ್ದರು.
ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಹೊಂಚು ದಾಳಿಯ ನಂತರ ಉಗ್ರಗಾಮಿ ಸಂಘಟನೆಗಳ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ.