ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಇನ್ನೊಂದು ಪ್ರಯತ್ನವನ್ನು ಪಾಕಿಸ್ಥಾನದ ಪರಮಾಪ್ತ ದೇಶವಾಗಿರುವ ಚೀನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ತನ್ನ ವಿಟೊ ಅಧಿಕಾರವನ್ನು ಬಳಸಿ ತಡೆದಿದೆ. ಹತ್ತು ವರ್ಷಗಳಲ್ಲಿ ಚೀನಾ ಇದು ನಾಲ್ಕನೇ ಸಲ ಮಸೂದ್‌ನ್ನು ಜಾಗತಿಕ ಉಗ್ರನಾಗುವುದರಿಂದ ರಕ್ಷಿಸುತ್ತಿರುವುದು. ಮಾಮೂಲು ಸಂದರ್ಭದಲ್ಲಾಗಿದ್ದರೆ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಯತ್ನದ ಫಲಿತಾಂಶ ಏನಾಗಬಹುದು ಎಂದು ಹಿಂದಿನ ಅನುಭವದ ಆಧಾರದಲ್ಲಿ ಊಹಿಸಬಹುದಿತ್ತು.
ಪುಲ್ವಾಮದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ 40 ಸಿಆರ್‌ಪಿಎಫ್ ಯೋಧರನ್ನು ಸಾಯಿಸಿದ ಬಳಿಕ ಪಾಕ್ ವಿಚಾರದಲ್ಲಿ ಚೀನಾದ ನಿಲುವು ತುಸು ಬದಲಾದಂತೆ ಕಂಡಿತ್ತು.ಸ್ವತಹ ಜೈಶ್ ಈ ದಾಳಿಯನ್ನು ತಾನು ನಡೆಸಿದ್ದೇನೆ ಎಂದು ಹೇಳಿಕೊಂಡ ಕಾರಣ ಚೀನಾವಾಗಲಿ, ಪಾಕಿಸ್ತಾನವಾಗಲಿ ಸಾಕ್ಷಿ ಕೇಳುವಂತಿರಲಿಲ್ಲ. ಹೀಗಾಗಿ ಈ ಸಲ ಅದು ತಡೆಯೊಡ್ಡಲಿಕ್ಕಿಲ್ಲ ಎಂಬ ನಿರೀಕ್ಷೆಯಿತ್ತು. ಆದರೆ ಕೊನೇ ಕ್ಷಣದಲ್ಲಿ ಚೀನ ತಾಂತ್ರಿಕ ಕಾರಣದ ನೆಪವೊಡ್ಡಿ ಮಸೂದ್ ಜಾಗತಿಕ ಉಗ್ರನೆಂದು ಘೋಷಿಸಲ್ಪಡುವುದನ್ನು ವಿಫಲಗೊಳಿಸಿದೆ.
ಈ ಮೂಲಕ ನಮ್ಮ ನೆರೆಯ 2 ದೇಶಗಳು ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ದ್ವಂದ್ವ ನಿಲುವು ಪ್ರದರ್ಶಿಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1267ರಡಿಯಲ್ಲಿ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವವನ್ನು ಈ ಸಲ ಅಮೆರಿಕ ಮತ್ತು ಬ್ರಿಟನ್ ಬೆಂಬಲದ ಜತೆಗೆ ಫ್ರಾನ್ಸ್ ಮಂಡಿಸಿತ್ತು.ಜಗತ್ತಿನ ಬಹುತೇಕ ದೇಶಗಳು ಈ ಪ್ರಸ್ತಾವವನ್ನು ಬೆಂಬಲಿಸಿವೆ. ಚೀನಾ ಜಗತ್ತಿನ ವಿರೋಧವನ್ನು ಲೆಕ್ಕಿಸದೆ ಪ್ರಸ್ತಾಪ ತಡೆದು ಪಾಕ್ ಅನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಚೀನಾ ದ ಈ ಹಠಮಾರಿ ಧೋರಣೆಗೆ ಹಲವು ಕಾರಣಗಳಿವೆ. ಮುಖ್ಯವಾಗಿ ಚೀನಾ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ ಮತ್ತು ಏಷ್ಯಾದಲ್ಲಿ ಭಾರತದ ಪ್ರಾಬಲ್ಯ ತಡೆಯುವುದು. ಕಾರಿಡಾರ್ ಅಡಿಯಲ್ಲಿ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳನ್ನು ಸಂಪರ್ಕಿಸುವ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಪಾಕ್ ಸಹಭಾಗಿತ್ವದಲ್ಲಿ ಜಾರಿಯಲ್ಲಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಹೊಡೆದುರುಳಿಸುವ ದೂರಾಲೋಚನೆ ಚೀನಕ್ಕಿದೆ.
ಪಾಕ್ ಜತೆಗಿನ ಬಾಂಧವ್ಯ, ಐಎಸ್‌ಐಯ ಸುಪ್ತ ಘಟಕಗಳಂತೆ ಕಾರ್ಯವೆಸಗುತ್ತಿರುವ ಜೈಶ್, ಲಷ್ಕರ್‌ನಂಥ ಉಗ್ರ ಸಂಘಟನೆಗಳಿಗಿರುವ ರಕ್ಷಣೆಯಿಂದ ಲಾಭವೇ ಇದೆ. ಯೋಜನೆಗಳಲ್ಲಿ ಸುಮಾರು 20,000 ಚೀನಿ ಕಾರ್ಮಿಕರು ದುಡಿಯುತ್ತಿದ್ದಾರೆ. ಉಯುYರ್ ಮುಸ್ಲಿಮರಿಗೆ ಚೀನಾ ನೀಡುತ್ತಿರುವ ಕಿರುಕುಳವನ್ನು ಪ್ರತಿಭಟಿಸುತ್ತಿರುವ ಬಲೂಚಿಸ್ತಾನ ಪ್ರತ್ಯೇಕವಾದಿಗಳು, ಪಾಕಿಸ್ತಾನಿ ತಾಲಿಬಾನ್ ಕಾರ್ಮಿಕರ ಮೇಲೆ ದಾಳಿ ಮಾಡುವ ಅಪಾಯವಿದೆ. ಜೈಶ್,ಲಷ್ಕರ್‌ನಂಥ ಉಗ್ರ ಪಡೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಈ ಮಾದರಿಯ ದಾಳಿಗಳನ್ನು ತಡೆಯಬಹುದು. ನಿಮ್ಮ ತಂಟೆಗೆ ನಾವು ಬರುವುದಿಲ್ಲ , ನಮ್ಮ ತಂಟೆಗೆ ನೀವು ಬರಬಾರದು ಎಂಬ ಒಳ ಒಪ್ಪಂದವನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳ ಜತೆಗೆ ಚೀನಾ ಮಾಡಿಕೊಂಡಿದೆ. ಹೀಗಾಗಿ ಮಸೂದ್, ಇನ್ನಿತರ ಉಗ್ರರ ವಿರುದ್ಧವಾಗಲಿ ಚೀನ ತಿರುಗಿ ಬಿದ್ದೀತು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಕ್ಕೆ ವಿಟೊ ಅಧಿಕಾರ ಇರುವ ತನಕ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಯತ್ನ ಸಫಲವಾಗದು. ಹಾಗೆಂದು ವಿಟೊ ಅಧಿಕಾರವನ್ನು ಚೀನದಿಂದ ಹಿಂಪಡೆಯುವ ಅಧಿಕಾರವೂ ಇಲ್ಲ. ವಿಶ್ವಸಂಸ್ಥೆ ಸನದಿನ ಪ್ರಕಾರ ವಿಟೊ ಅಧಿಕಾರ ಹೊಂದಿರುವ ದೇಶಗಳು ತಾವಾಗಿ ಹೊರ ಹೋಗಲು ಮಾತ್ರ ಅವಕಾಶವಿದೆ. ಪರಿಸ್ಥಿತಿ ಹೀಗಿರುವುದರಿಂದ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಪದೇ ಪದೇ ವಿಫಲ ಪ್ರಯತ್ನ ಮಾಡುವ ಬದಲು ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯನ್ನು ನಿರ್ಮೂಲನಗೊಳಿಸಲು ಬೇರೆ ಹಾದಿ ಅನುಸರಿಸುವುದೇ ಸೂಕ್ತ.