Advertisement

ಭಾರತಕ್ಕೆ ಪಾಕ್‌ಗಿಂತ ಚೀನಾವೇ ಅಪಾಯಕಾರಿ

12:58 PM Sep 06, 2017 | Team Udayavani |

ಹುಬ್ಬಳ್ಳಿ: ಹಿಂದಿನ ರಾಷ್ಟ್ರೀಯ ನಾಯಕರ ದೂರದೃಷ್ಟಿ ಕೊರತೆ ಕಾರಣದಿಂದ ಭಾರತ ಚೀನಾದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ರಾಷ್ಟ್ರೀಯ ಚಿಂತಕ ಬಿ.ಎಲ್‌. ಸಂತೋಷ ಹೇಳಿದರು. ಇಲ್ಲಿನ ಕರ್ನಾಟಕ ವಾಣಿಜೋದ್ಯಮ ಸಂಸ್ಥೆಯಲ್ಲಿ ಆಯೋಜಿಸಿದ್ದ “ಚೀನಾ ಸವಾಲು ನಮ್ಮ ಹೊಣೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಪಾಕಿಸ್ತಾನವೇ ನಮ್ಮ ಶತ್ರು ರಾಷ್ಟ್ರವೆಂದು ತಿಳಿದಿದ್ದೇವೆ. ಆದರೆ, ಚೀನಾ ಅದಕ್ಕಿಂತ ಗಂಭೀರವಾದ ಅಡೆತಡೆಗಳನ್ನು ನಮ್ಮ ದೇಶದ ಮೇಲೆ ಒಡ್ಡುತ್ತಿದೆ. ಘೋಷಿತ ಯುದ್ಧ ಮಾಡುವುದಕ್ಕಿಂತ ಭಾರತವನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಮಹತ್ವಕಾಂಕ್ಷೆ ಚೀನಾಕ್ಕಿದೆ. ಅ.1ರಂದು ಚೀನಾದಲ್ಲಿ ಚುನಾವಣೆ ಇರುವ ಕಾರಣಕ್ಕೆ ಡೊಕ್ಲಾಂ ಸಮಸ್ಯೆ ಉದ್ಭವಿಸಿದೆಯೇ ವಿನಃ ಭಾರತದ ಮೇಲೆ ಯುದ್ಧ ಮಾಡಬೇಕೆಂಬ ಕಾರಣಕ್ಕಲ್ಲ ಎಂದರು. 

ನಮ್ಮ ರಾಷ್ಟ್ರದ ಸುತ್ತಲಿನ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಚೀನಾ ಭಾರತದ ಮೇಲೆ ಎತ್ತಿಕಟ್ಟುವ ಒಳತಂತ್ರ ಅನುಸರಿಸುತ್ತಿದೆ. ಹೀಗಾಗಿ ಭಾರತದ ಗಡಿಯಲ್ಲಿರುವ ದೇಶಗಳಲ್ಲಿ ಬೃಹತ್‌ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ 1300ಕ್ಕೂ ಹೆಚ್ಚು ಬಾರಿ ಗಡಿಯಲ್ಲಿ ಅತಿಕ್ರಮಣ ಮಾಡುವ ಯತ್ನ ಚೀನಾದಿಂದ ನಡೆದಿದೆ. ಇದರ ಮುಂದುರಿದ ಭಾಗವೇ ಡೊಕ್ಲಾಂ ಗಡಿ ವಿವಾದ.

ಯುದ್ಧ ಸಂಭವಿಸಿದರೆ ಆಗಬಹುದಾದ ಅನಾಹುತಗಳ ಬಗ್ಗೆ ಚೀನಾಕ್ಕೆ ಅಳುಕಿದೆ. ಹೀಗಾಗಿ ಭಾರತವನ್ನು ವಿವಿಧ ಆಯಾಮಗಳಿಂದ ಹಿಡಿದಿಟ್ಟುಕೊಳ್ಳಬೇಕೆಂಬ ಏಕೈಕ ಉದ್ದೇಶ ಹೊಂದಿದೆ ಎಂದು ಹೇಳಿದರು. ಆರ್ಥಿಕವಾಗಿ ಕುಸಿಯುತ್ತಿರುವ ರಾಷ್ಟ್ರಗಳನ್ನು ಗುರುತಿಸಿ ಚೀನಾ ಹೂಡಿಕೆ ಮಾಡುತ್ತಿದೆ. ಒನ್‌ ಬೆಲ್ಟ್ ಒನ್‌ ರೋಡ್‌ ಯೋಜನೆ ಕೈಗೊಳ್ಳುವ ಮೂಲಕ ಬಹುತೇಕ ರಾಷ್ಟ್ರಗಳನ್ನು ತನ್ನ ದಾಕ್ಷಿಣ್ಯಕ್ಕೆ ಸಿಲುಕಿರುವ ದೊಡ್ಡ ತಂತ್ರಗಾರಿಕೆ ರೂಪಿಸಿದೆ.

ಭಾರತ ವಿರೋಧಿಸುತ್ತಿರುವ ಕಾರಣದಿಂದ ಈ ಯೋಜನೆಗೆ ಹಿನ್ನಡೆಯಾಗಿದೆ. ಸಾರ್ವಜನಿಕ ವಲಯದ ಕೈಗಾರಿಕೆಗಳು ಕ್ರಮೇಣ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಸ್ತುಗಳ ರμ¤ನಿಂದ ಮಾತ್ರ ಚೀನಾಕ್ಕೆ ಆದಾಯ ಬರುತ್ತಿದ್ದು, ವಿವಿಧ ರಾಷ್ಟ್ರಗಳಲ್ಲಿ ಮಾಡಿರುವ ಹೂಡಿಕೆ ವಾಪಸಾಗದಿರುವುದು ಚೀನಾಕ್ಕೆ ದೊಡ್ಡ ಹೊಡೆತ ನೀಡಿದೆ. ಇಂತಹ ಅನೇಕ ಸಮಸ್ಯೆಗಳನ್ನು ಚೀನಾ ಎದುರಿಸುತ್ತಿದೆ ಎಂದರು. 

Advertisement

ಚೀನಾದಿಂದ ಭಾವನಾತ್ಮಕವಾಗಿ ನಮ್ಮನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಚೀನಾದಲ್ಲಿ ಶೇ. 92ರಷ್ಟು ಬೌದ್ಧ ಧರ್ಮೀಯರಿದ್ದಾರೆ. ಅವರೆಲ್ಲರ ಗಮನ ಭಾರತದತ್ತ ವಾಲದಂತೆ ಭಗವಾನ್‌ ಬುದ್ಧ ಚೀನಾದಲ್ಲಿ ಜನಿಸಿದ್ದ ಎಂಬುದು ಸೇರಿದಂತೆ ಪ್ರತಿಯೊಂದು ಅಂಶಗಳನ್ನು ಸೃಷ್ಟಿಸುವ ಕಾರ್ಯ ನಡೆಸಿದೆ. ಬುದ್ಧನನ್ನು ಕೂಡ ಮೇಡ್‌ ಇನ್‌ ಚೈನಾ ಮಾಡಲು ಹೊರಟಿದೆ. ಒಂದು ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಅವಶ್ಯ ಎನ್ನುವುದು ಅಲ್ಲಿನ ಆಡಳಿತ ವೈಖರಿಯಿಂದ ಅರ್ಥವಾಗುತ್ತದೆ ಎಂದು ಹೇಳಿದರು.

ದೇಶದ ನಕ್ಸಲ್‌ ಚಟುವಟಿಕೆಗೆ ಚೀನಾ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ಭಾರತದ 196 ಜಿಲ್ಲೆಗಳಲ್ಲಿ ನಡೆಯುತ್ತಿದ್ದ ನಕ್ಸಲ್‌ ಚಟುವಟಿಕೆ ಇದೀಗ ಕೇವಲ 36ಕ್ಕೆ ಕ್ಷೀಣಿಸಿದೆ. ದೇಶದೊಳಗಿನ ಗಂಡಾಂತರ ಹತ್ತಿಕ್ಕುವಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ನಕ್ಸಲ್‌ ಚಟುವಟಿಕೆಗಳಿಗೆ ತಿಲಾಂಜಲಿ ಹಾಡುವ ಪ್ರಯತ್ನ ನಡೆಯುತ್ತಿದೆ ಎಂದರು. 

ಚೀನಾ ವಸ್ತು ಬಳಸಬೇಡಿ: ಚೀನಾ ಕೇವಲ ಗಡಿಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ. ಪ್ರತಿಯೊಬ್ಬರ ಮನೆಯಲ್ಲಿ ಹಾಸುಹೊಕ್ಕಾಗಿದೆ. ಚೀನಾ ಉತ್ಪಾದಿಸುವ ವಸ್ತುಗಳಿಗೆ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ನಮ್ಮ ದೇಶದ ಮೇಲೆ ಇಷ್ಟೊಂದು ತಗಾದೆ ತೆಗೆಯುತ್ತಿರುವ ಚೀನಾ ವಸ್ತುಗಳನ್ನು ಸರ್ಕಾರ ರದ್ದು ಮಾಡಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಆದರೆ, ಈ ವಸ್ತುಗಳನ್ನು ನಾವು ಬಳಸುವುದಿಲ್ಲ ಎಂದು ಪಣ ತೊಡಬೇಕು.

ಇಂತಹ ಒಂದು ಜಾಗೃತಿ ದೇಶದ ಪ್ರತಿಯೊಬ್ಬ ನಾಗರಿಕನಲ್ಲಿ ಮೂಡಿದರೆ ಚೀನಾವನ್ನು ತಣ್ಣಗಾಗಿಸಬಹುದು ಎಂದರು. ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಬಸವರಾಜ ಬೊಮ್ಮಾಯಿ, ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಲೆಕ್ಕಪರಿಶೋಧಕ ವಿನಯಕುಲಕರ್ಣಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next