ಹೊಸದಿಲ್ಲಿ : 2017ರಲ್ಲಿ ರಶ್ಯದ ರಕ್ಷಣಾ ವೆಚ್ಚ ಗಮನಾರ್ಹವಾಗಿ ಕುಸಿದಿದೆಯಾದರೂ ಅದೇ ವರ್ಷ ಭಾರತ, ಚೀನ ಮತ್ತು ಸೌದಿ ಅರೇಬಿಯ ದೇಶಗಳ ಮಿಲಿಟರಿ ವೆಚ್ಚಗಳು ಶೇ.1.1ರಷ್ಟು ಏರಿದ್ದು ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಸಿಂಹ ಪಾಲನ್ನು ದಾಖಲಿಸಿವೆ.
ವಿಶ್ವಾದ್ಯಂತದ ಪ್ರಮುಖ ದೇಶಗಳ ಮಿಲಿಟರಿ ಖರ್ಚು ವೆಚ್ಚಗಳ ಮೇಲೆ ಕಣ್ಣಿಡುವ ಸ್ವತಂತ್ರ ಸಂಸ್ಥೆಯಾಗಿರುವ ಸ್ಟಾಕ್‌ಹೋಮ್ ಇಂಟರ್‌ನ್ಯಾಶಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ), “ಚೀನ ತನ್ನ ನೆರೆಹೊರೆಯ ದೇಶಗಳೊಂದಿಗೆ ಉದ್ವಿಗ್ನತೆ ಹೊಂದಿರುವುದೇ ಆ ದೇಶಗಳ ಮಿಲಿಟರಿ ವೆಚ್ಚಗಳ ಗಮನಾರ್ಹ ಏರಿಕೆಗೆ ಕಾರಣವಾಗಿದೆ’ ಎಂದು ಹೇಳಿದೆ.
2017ರಲ್ಲಿ ಜಾಗತಿಕ ಮಿಲಿಟರಿ ಖರ್ಚು ವೆಚ್ಚಗಳು ಗಮನಾರ್ಹವಾಗಿ ಏರಿದ್ದು ಚೀನ ಮತ್ತು ಭಾರತ ಮುಂಚೂಣಿಯಲ್ಲಿವೆ ಎಂದು ಸಿಪ್ರಿ ಹೇಳಿದೆ.
2017ರಲ್ಲಿ ಒಟ್ಟು ಜಾಗತಿಕ ಮಿಲಿಟರಿ ಖರ್ಚು ವೆಚ್ಚಗಳು 1,739 ಶತಕೋಟಿ ಡಾಲರ್‌ಗಳಾಗಿವೆ. ರಶ್ಯದ ಮಿಲಿಟರಿ ಖರ್ಚು ಇಳಿಮುಖವಾಗಿದೆ. ಅಮೆರಿಕದ ಮಿಲಿಟರಿ ಖರ್ಚು ಬಹುತೇಕ ನಿಶ್ಚಲವಾಗಿದೆ ಎಂದು ಸಿಪ್ರಿ ಹೇಳಿದೆ.
ಒಟ್ಟು ಜಾಗತಿಕ ಮಿಲಿಟರಿ ಖರ್ಚಿನಲ್ಲಿ ಚೀನದ ದೊಡ್ಡ ಪಾಲಿದ್ದು 2016ಕ್ಕೆ ಹೋಲಿಸಿದರೆ, ಅದು ಕಳೆದ ವರ್ಷ 2017ರಲ್ಲಿ ತನ್ನ ಮಿಲಿಟರಿ ವೆಚ್ಚವನ್ನು ಶೇ.5.6 (228 ಬಿಲಿಯ ಡಾಲರ್) ರಷ್ಟು ಏರಿಸಿದೆ; ಭಾರತ ತನ್ನ ಮಿಲಿಟರಿ ಖರ್ಚನ್ನು ಶೇ.5.5ರಷ್ಟು (63.9 ಬಿಲಿಯ ಡಾಲರ್) ಏರಿಸಿದೆ.
ಚೀನ ತನ್ನ ನೆರೆಹೊರೆಯ ದೇಶಗಳೊಂದಿಗೆ ಹೊಂದಿರುವ ಉದ್ವಿಗ್ನತೆಯಿಂದಾಗಿ ಅವುಗಳ ಮಿಲಿಟರಿ ಖರ್ಚುಗಳು ಗಮನಾರ್ಹವಾಗಿ ಏರಿರುವುದಾಗಿ ಸಿಪ್ರಿ ಹೇಳಿದೆ.