Advertisement

ಚೀನ ಉಪಟಳ ಹಗುರವಾಗಿ ಪರಿಗಣಿಸುವಂತಿಲ್ಲ

06:22 AM May 13, 2020 | mahesh |

ಭಾರತವು ಕೋವಿಡ್ ದ ವಿರುದ್ಧ ಹೋರಾಡುತ್ತಿರುವ ಈ ವೇಳೆಯಲ್ಲೇ ಅತ್ತ ಪಾಕಿಸ್ಥಾನ ಗಡಿಯಾಚೆಗಿಂದ ಉಗ್ರರನ್ನು ನುಸುಳಿಸುವ ಪ್ರಯತ್ನದಲ್ಲಿ ತೊಡಗಿರುವಂತೆಯೇ, ಇನ್ನೊಂದೆಡೆ ಪಾಕಿಸ್ಥಾನದ ಪರಮಮಿತ್ರ ಚೀನ ಕೂಡ ಭಾರತಕ್ಕೆ ತೊಂದರೆ ನೀಡಲು ಪ್ರಯತ್ನಿಸಲಾರಂಭಿಸಿದೆ. ಕೆಲವೇ ದಿನಗಳ ಹಿಂದಷ್ಟೇ ಪೂರ್ವ ಲಡಾಖ್‌ ಮತ್ತು ಉತ್ತರ ಸಿಕ್ಕಿಂನ ನಕು ಲಾ ಪಾಸ್‌ ಬಳಿ ಚೀನಿ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದು, ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದರು. ಗಮನಾರ್ಹ ಸಂಗತಿಯೆಂದರೆ, ಎರಡೂ ಪ್ರದೇಶಗಳಲ್ಲೂ ಒಂದೇ ಸಮಯದಲ್ಲೇ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದನ್ನು ನೋಡಿದರೆ, ಇದರ ಹಿಂದೆ ವ್ಯವಸ್ಥಿತ ಸಂಚು ಇರುವ ಅನುಮಾನ ಮೂಡುತ್ತದೆ.

Advertisement

ಈಗ ಲಡಾಖ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಚೀನದ ಸೇನಾ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಒಟ್ಟಲ್ಲಿ ಚೀನ ಭಾರತೀಯ ಸೈನಿಕರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಎನ್ನುವುದು ಈ ಘಟನೆಗಳಿಂದ ಸಾಬೀತಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ವ್ಯಸ್ಥವಾಗಿರುವಾಗಲೇ ಗಡಿ ಭಾಗದಲ್ಲಿ ಸಮತೋಲನ ಕೆಡಿಸಿ, ತನ್ನ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿದ್ದಂತಿದೆ ಚೀನ .

ಕಳೆದ ಕೆಲವು ವರ್ಷಗಳಿಂದಲೂ ಚೀನಿ ಸೈನಿಕರು ಭಾರತೀಯ ಸೀಮೆಯೊಳಗೆ ನುಗ್ಗುವ, ನ್ಯೂಟ್ರಲ್‌ ವಲಯಗಳಲ್ಲಿ ತಮ್ಮ ಇರುವಿಕೆಯನ್ನು ಸ್ಥಾಪಿಸಲು ಪ್ರಯತ್ನಿಸುವ ಘಟನೆಗಳು ನಡೆದೇ ಇವೆ. 2017ರಲ್ಲಿ ಲಡಾಖ್‌ನಲ್ಲಿ ಚೀನಿ ಸೈನಿಕರು ಅನೇಕ ಕಿಲೋಮೀಟರ್‌ಗಳವರೆಗೆ ನಮ್ಮ ಸೀಮೆಯೊಳಕ್ಕೆ ನುಸುಳಿಬಿಟ್ಟಿದ್ದರು. ಸುಮಾರು 70 ದಿನಗಳವರೆಗೆ ಎರಡೂ ರಾಷ್ಟ್ರಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ “ಡೋಕ್ಲಾಂ’ ಘಟನೆಯು ಚೀನ ದ ದುರುದ್ದೇಶಗಳಿಗೆ ಸ್ಪಷ್ಟ ಕನ್ನಡಿ ಹಿಡಿಯಿತು. ಕಳೆದ ವರ್ಷದ ಸೆಪ್ಟಂಬರ್‌ ತಿಂಗಳಲ್ಲೂ ಪೂರ್ವ ಲಡಾಖ್‌ನಲ್ಲಿ ಈಗಿನಂಥದ್ದೇ ಸನ್ನಿವೇಶ ಏರ್ಪಟ್ಟಿತ್ತು. ಚೀನಿ ಸೈನಿಕರು ಯಾವಾಗೆಲ್ಲ ಭಾರತೀಯ ಕ್ಷೇತ್ರಗಳಲ್ಲಿ ನುಸುಳಿದ್ದಾರೋ ಆಗೆಲ್ಲ ಆ ದೇಶ ಒಂದೇ ತರ್ಕವನ್ನು ಎದುರಿಡುತ್ತಾ ಬಂದಿದೆ. ಗಡಿ/ಸೀಮೆಗಳು ಸ್ಪಷ್ಟವಾಗಿ ಇರದ ಕಾರಣದಿಂದಾಗಿಯೇ, ಈ ರೀತಿ ಆಗುತ್ತಿದೆ ಎನ್ನುವುದು ಚೀನ ದ ವಾದ. 1962ರ ಭಾರತ-ಚೀನ ಯುದ್ಧದ ನಂತರದಿಂದಲೂ ಚೀನ ಲಡಾಖ್‌ ಅನ್ನು ತನ್ನ ಪ್ರಾಂತ್ಯ ಎಂದು ಹೇಳುತ್ತಾ ಬಂದಿದೆ.

ಕಳೆದ ವರ್ಷ ಜಮ್ಮು-ಕಾಶ್ಮೀರದಿಂದ ಆರ್ಟಿಕಲ್‌ 370ಯನ್ನು ನಿಷ್ಪ್ರಭಾವಗೊಳಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಅನಂತರದಿಂದ ಚೀನ ಹೌಹಾರಿದೆ. ಈ ವಿಷಯವನ್ನು ಅದು ಪ್ರಬಲವಾಗಿಯೂ ವಿರೋಧಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ ಪಾಕಿಸ್ತಾನಕ್ಕೂ ಈ ವಿಷಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣದಿಂದಲೇ ಅಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ಆ ಭಾಗಗಳಲ್ಲಿ ತೊಂದರೆ ಸೃಷ್ಟಿಸಲು ಅವು ಪ್ರಯತ್ನಿಸುತ್ತಲೇ ಇವೆ. ಭಾರತ ಮತ್ತು ಚೀನ ನಡುವಿನ ಗಡಿರೇಖೆಯು 3 ಸಾವಿರ ಕಿಲೋಮೀಟರ್‌ಗೂ ಉದ್ದವಿದ್ದು, ಯಾವುದೇ ಕಾರಣಕ್ಕೂ ಇಂಥ ಗತಿವಿಧಿಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಒಂದು ಗುಣಾತ್ಮಕ ಸಂಗತಿಯೆಂದರೆ, ಕೆಲವು ವರ್ಷಗಳಿಂದ ಭಾರತೀಯ ಸೈನ್ಯ ನಿಜ ಸಾಮರ್ಥ್ಯ ಚೀನಕ್ಕೂ ಅರ್ಥವಾಗಿದೆ(ಅದರಲ್ಲೂ ಪಾಕಿಸ್ಥಾನದ ವಿರುದ್ಧ ಭಾರತೀಯ ಸೈನ್ಯ ನಡೆಸಿದ ಸರ್ಜಿಕಲ್‌ ದಾಳಿಗಳ ಅನಂತರ). ಹಾಗಾಗಿ, ಅದು ಹದ್ದುಮೀರುವ ಹುಚ್ಚುತನವಂತೂ ಮಾಡಲಾರದು. ಅಚ್ಚರಿಯ ವಿಷಯವೆಂದರೆ, ಒಂದೆಡೆ ಚೀನ ಭಾರತವನ್ನು ತನ್ನ ಅತಿದೊಡ್ಡ ಮಾರುಕಟ್ಟೆ ಎಂದು ನೋಡುತ್ತದೆ. ಈ ವಿಚಾರದಲ್ಲಿ ನಮ್ಮೊಂದಿಗೆ ಒಳ್ಳೆಯ ಸಂಬಂಧ ಸಾಧಿಸಲು ಪ್ರಯತ್ನಿಸುತ್ತದೆ. ಇನ್ನೊಂದೆಡೆ ಗಡಿ ವಿವಾದದ ಹೆಸರಲ್ಲಿ ತೊಂದರೆ ಕೊಡುವ ಕೆಲಸವನ್ನೂ ಮಾಡುತ್ತಲೇ ಇದೆ!

Advertisement

Udayavani is now on Telegram. Click here to join our channel and stay updated with the latest news.

Next