ಬೀಜಿಂಗ್ : ಭಾರತದ ಉಪಗ್ರಹ ಹಾಗೂ ಕ್ಷಿಪಣಿ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಲೇ ಇರುವ ಚೀನ ಇದೀಗ ಹತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಪರೀಕ್ಷಿಸಿದೆ.
ಈ ಬೆಳವಣಿಗೆಯನ್ನು ಅನುಲಕ್ಷಿಸಿ ಗಾರ್ಡಿಯನ್ ಪತ್ರಿಕೆ ಅಮೆರಿಕ ಮತ್ತು ಚೀನ ನಡುವೆ ವಿವಾದಾತ್ಮಕ ದಕ್ಷಿಣ ಚೀನ ಸಮುದ್ರ ತಗಾದೆಗೆ ಸಂಬಂಧಿಸಿ ಸೇನಾ ಸಮರ ನಡೆಸುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ನೀಡಿದೆ.
ಸುಮಾರು 10 ಗುರಿ ತಾಣಗಳನ್ನು ಭೇದಿಸುವ ಲಕ್ಷ್ಯ ಹೊಂದಿರುವ ಡಿಎಫ್-5ಸಿ ಕ್ಷಿಪಣಿ ಪರೀಕ್ಷೆಯನ್ನು ಚೀನ ನಡೆಸಿರುವ ಬಗ್ಗೆ ಅಮೆರಿಕದ ಗುಪ್ತಚರ ದಳ ಮಾಹಿತಿ ಪಡೆದಿರುವುದಾಗಿ ವಾಷಿಂಗ್‌ಟನ್ ಪತ್ರಿಕ ವರದಿ ಮಾಡಿದೆ.
ಚೀನವು ತನ್ನ ಶಾಂಕ್ಸಿ ಪ್ರಾಂತ್ಯದ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಹತ್ತು ನಿಷ್ಕ್ರಿಯ ಅಣ್ವಸ್ತ್ರ ಸಿಡಿತಲೆಗಳನ್ನು ಜೋಡಿಸಿಟ್ಟ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಹಾಗಿದ್ದರೂ ಈ ಡಿಎಫ್-5ಸಿ ಕ್ಷಿಪಣಿಯು 1980ರಲ್ಲೇ ಚೀನೀ ಸೇನೆಗೆ ಸೇರ್ಪಡೆಗೊಂಡಿದ್ದು ಇದೀಗ ಡಿಎಫ್-5 ಅಣ್ವಸ್ತ್ರ ವಾಹಕ ಕ್ಷಿಪಣಿಯು ಸುಧಾರಿತ ಮಾದರಿಯಾಗಿರುವುದಾಗಿ ವರದಿಯಾಗಿದೆ.