ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಬಲವಾಗಿ ವಿರೋಧಿಸಿರುವ ಚೀನ ತಾನು ಭಾರತಕ್ಕೆ ಈ ಬಗ್ಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸುವುದಾಗಿ ಹೇಳಿದೆ.
ಅರುಣಾಚಲ ಪ್ರದೇ ದಕ್ಷಿಣ ಟಿಬೆಟ್ ಭಾಗವೆಂದು ಚೀನ ಹೇಳಿಕೊಳ್ಳುತ್ತಿದ್ದು ಅದು ತನಗೆ ಸೇರಿದುದೆಂಬ ವಾದವನ್ನು ಲಾಗಾಯ್ತಿನಿಂದಲೂ ಮಂಡಿಸುತ್ತಾ ಬರುತ್ತಿದೆ.
ಪ್ರಧಾನಿ ಮೋದಿ ಅವರು ಇಂದು ಗುರುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅವರು, ಚೀನ – ಭಾರತ ಗಡಿ ಪ್ರಶ್ನೆ ಕುರಿತಂತೆ ಚೀನದ ನಿಲುವು ಅತ್ಯಂತ ಸ್ಪಷ್ಟವಿದೆ ಮತ್ತು ಅದು ಕ್ರಮಬದ್ಧವಾಗಿದೆ ಎಂದು ಹೇಳಿದರು.
ಚೀನ ಸರಕಾರ ಅರುಣಾಚಲ ಪ್ರದೇಶವನ್ನು ಎಂದೂ ಮಾನ್ಯ ಮಾಡಿಲ್ಲ; ಅಂತೆಯೇ ಭಾರತೀಯ ನಾಯಕನೋರ್ವ ಆ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನ ಬಲವಾಗಿ ವಿರೋಧಿಸುತ್ತದೆ ಎಂದು ಗೆಂಗ್ ಶುವಾಂಗ್ ಹೇಳಿರುವುದನ್ನು ಉಲ್ಲೇಖೀಸಿ ಚೀನದ ಸರಕಾರಿ ಒಡೆತನದ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ವಿವಾದಿತ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ನಾವು ಭಾರತದ ರಾಜತಾಂತ್ರಿಕತೆಯೊಂದಿಗೆ ನಮ್ಮ ಪ್ರತಿಭಟನೆ, ಆಕ್ಷೇಪವನ್ನು ದಾಖಲಿಸುತ್ತೇವೆ ಎಂದು ಗೆಂಗ್ ಶುವಾಂಗ್ ಎಚ್ಚರಿಕೆ ನೀಡಿದರು.