Advertisement

ಕೊನೆಗೂ ಸತ್ಯ ಒಪ್ಪಿದ ಚೀನ; ಗಡಿಯಲ್ಲಿ ಭಾರತೀಯ ಸೇನೆಯ ಬಲವರ್ಧನೆಗೆ ಕ್ರಮ

02:09 AM Jun 23, 2020 | Sriram |

ಹೊಸದಿಲ್ಲಿ: ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ನಡೆದ ಘರ್ಷಣೆಯ ಸಂದರ್ಭ ತನ್ನ ಮಿಲಿಟರಿಯ ಕಮಾಂಡಿಂಗ್‌ ಅಧಿಕಾರಿಯೂ ಮೃತಪಟ್ಟಿರುವುದನ್ನು ಚೀನ ಕೊನೆಗೂ ಒಪ್ಪಿಕೊಂಡಿದೆ.

Advertisement

ಆದರೆ ಎಷ್ಟು ಮಂದಿ ಸೈನಿಕರು ಸತ್ತಿದ್ದಾರೆ ಎಂಬ ಬಗ್ಗೆ ಮಾತ್ರ ಅದು ತುಟಿ ಎರಡು ಮಾಡಿಲ್ಲ.ಈ ಮಧ್ಯೆ ಗಡಿಯಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದ್ದು, ಭಾರತವು ಒಂದು ಸಾವಿರ ಪರ್ವತಾರೋಹಿ ಯೋಧರುಳ್ಳ ಪಡೆಯೊಂದನ್ನು ರವಾನಿಸಿದೆ. ಹಾಗೆಯೇ ಯುದ್ಧ ಸ್ಥಿತಿ ಎದುರಿಸುವ ಸಲುವಾಗಿ ಈಗಾಗಲೇ ರಷ್ಯಾಕ್ಕೆ ಬೇಡಿಕೆ ಸಲ್ಲಿಸಿರುವ ಎಸ್‌-400 ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಶೀಘ್ರವಾಗಿ ಒದಗಿಸುವಂತೆ ಒತ್ತಾಯಿಸಲು ಸಿದ್ಧತೆ ನಡೆದಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮೂರು ದಿನಗಳ ಭೇಟಿಗಾಗಿ ರಷ್ಯಾಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ಪ್ರಸ್ತಾವಿಸುವ ಸಾಧ್ಯತೆ ಇದೆ.

ತಣ್ಣಗೆ ಒಪ್ಪಿಕೊಂಡ ಚೀನ
ಗಾಲ್ವಾನ್‌ ಘರ್ಷಣೆಯಲ್ಲಿ ಭಾರತ ಅನುಭವಿಸಿದ್ದಕ್ಕಿಂತ ಹೆಚ್ಚಿನ ಆಘಾತಕ್ಕೆ ಒಳಗಾಗಿದ್ದರೂ ಒಪ್ಪಿಕೊಳ್ಳದಿದ್ದ ಚೀನ ಈಗ ಅದರ ಬಗ್ಗೆ ನಿಧಾನವಾಗಿ ಬಾಯಿಬಿಟ್ಟಿದೆ. ಘರ್ಷಣೆಯಲ್ಲಿ ತನ್ನ ಕಡೆಯ ಮಿಲಿಟರಿ ಕಮಾಂಡಿಂಗ್‌ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಒಪ್ಪಿಕೊಂಡಿದೆ. ಆದರೆ ತನ್ನ ಒಟ್ಟು ಎಷ್ಟು ಮಂದಿ ಯೋಧರು ಸತ್ತಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ, ಚೀನದ 45 ಯೋಧರು ಮೃತಪಟ್ಟಿದ್ದಾರೆ. ಆದರೆ ಅದನ್ನು ಒಪ್ಪಿಕೊಳ್ಳಲು ಚೀನ ಸಿದ್ಧವಿಲ್ಲ.

ಬೀಜಿಂಗ್‌ನ ಕೆಲವು ಸ್ಥಳೀಯ ಮಾಧ್ಯಮಗಳಿಗೆ ಈ ಬಗ್ಗೆ ಉತ್ತರಿಸಿರುವ ಚೀನದ ಅಧಿಕಾರಿಗಳು, ಭಾರತೀಯ ಯೋಧರಿಗಿಂತ ನಮ್ಮ ಸೈನಿಕರು ಕಡಿಮೆ ಸಂಖ್ಯೆಯಲ್ಲಿ ಹುತಾತ್ಮರಾಗಿದ್ದರೆ ಭಾರತಕ್ಕೆ ಹೊಟ್ಟೆಯುರಿಯಾಗುತ್ತದೆ. ಅದರಿಂದ ಅದು ಹಗೆ ತೀರಿಸಿಕೊಳ್ಳಲು ಬೇರೊಂದು ರೀತಿಯ ತಂತ್ರಗಾರಿಕೆ ಅನುಸರಿಸಬಹುದು ಎಂಬ ಕಾರಣಕ್ಕಾಗಿ ನಾವು ನೈಜ ಸಾವಿನ ಸಂಖ್ಯೆ ನೀಡುತ್ತಿಲ್ಲ ಎಂದಿದೆ.

ಪ್ರತಿಕ್ರಿಯಿಸಲು ನಕಾರ
ಗಾಲ್ವಾನ್‌ ಘರ್ಷಣೆಯಲ್ಲಿ ಚೀನದ 40ಕ್ಕೂ ಹೆಚ್ಚು ಸೈನಿಕರು ಸತ್ತಿದ್ದಾರೆಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್‌ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಚೀನದ ವಿದೇಶಾಂಗ ಸಚಿವ ಝಾವೊ ಲಿಜಾನ್‌ ನಿರಾಕರಿ ಸಿದ್ದಾರೆ. ಎಷ್ಟು ಚೀನೀ ಸೈನಿಕರು ಸತ್ತಿ ದ್ದಾರೆಂಬ ಬಗ್ಗೆ ಮಾಹಿತಿಯಿಲ್ಲ ಪರಿಸ್ಥಿತಿ ಸುಧಾರಣೆಗಾಗಿ ಎರಡೂ ದೇಶಗಳು ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.

Advertisement

“ಮಹಾ’ದಿಂದ ಮೂರು ಯೋಜನೆಗೆ ತಡೆ
ಭಾರತದಲ್ಲಿ ಎದ್ದಿರುವ ಚೀನ ವಿರೋಧಿ ಅಲೆಗೆ ಸ್ಪಂದಿಸಿರುವ ಮಹಾರಾಷ್ಟ್ರ ಸರಕಾರವು ಇತ್ತೀಚೆಗೆ ವಿದೇಶಿ ನೇರ ಬಂಡವಾಳ (ಎಫ್ಡಿಐ) ಅಡಿಯಲ್ಲಿ ಚೀನಕ್ಕೆ ನೀಡಲಾಗಿದ್ದ ಸುಮಾರು 5,000 ಕೋಟಿ ರೂ.ಗಳ ಯೋಜನೆಗಳಿಗೆ ಸದ್ಯದ ಮಟ್ಟಿಗೆ ಬ್ರೇಕ್‌ ಹಾಕಿದೆ. ಗಾಲ್ವಾನ್‌ ಘರ್ಷಣೆ ನಡೆಯುವ ಕೆಲವೇ ತಾಸುಗಳ ಮುನ್ನ ಜೂ. 15ರಂದು ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯ್‌ ಅವರು ಚೀನದ ಕಂಪೆನಿಗಳ ಜತೆಗೆ ಮೂರು ಯೋಜನೆಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದ್ದರು.

ಕಮಾಂಡರ್ ಜತೆ ಸೇನಾ ಮುಖ್ಯಸ್ಥರ ಚರ್ಚೆ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರು ದಿಲ್ಲಿಯಲ್ಲಿ ಸೇನಾ ಕಮಾಂಡರ್‌ಗಳ ಜತೆ ಉನ್ನತ ಮಟ್ಟದ ಎರಡು ದಿನಗಳ ಸಭೆ ಆರಂಭಿಸಿದ್ದಾರೆ. ಪ್ರಸ್ತಾವ ನುಡಿಯಲ್ಲೇ ಸೇನಾ ಮುಖ್ಯಸ್ಥರು ಚೀನ ಜತೆಗಿನ ಸಂಘರ್ಷದ ಬಗ್ಗೆ ಮಾಹಿತಿ ನೀಡಿದ್ದಾರೆ. ಲಡಾಖ್‌, ಅರುಣಾಚಲ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಭಾಗದ ಗಡಿಯಲ್ಲಿ ಆಗಿರುವ ಸಿದ್ಧತೆಗಳ ಬಗ್ಗೆಯೂ ಚರ್ಚಿಸಲಾಗಿದೆ.

ರಸ್ತೆ ನಿರ್ಮಾಣಕ್ಕೆ ವೇಗ
ಎಲ್‌ಎಸಿಯಲ್ಲಿ ತಾನು ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗಳ ವೇಗವರ್ಧನೆಗೆ ಭಾರತ ಸರಕಾರ ನಿರ್ಧರಿಸಿದೆ. ಒಟ್ಟು 72 ಕಾಮಗಾರಿಗಳು ನಡೆಯುತ್ತಿದ್ದು,

ಇದರಲ್ಲಿ 32ಕ್ಕೆ ಹೆಚ್ಚಿನ ವೇಗ ನೀಡಲು ತೀರ್ಮಾನಿಸಲಾಗಿದೆ. ಸೋಮವಾರ ನಡೆದ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವ ಲಡಾಖ್‌ನಲ್ಲಿ ಚೀನದ ಸೈನಿಕರ ಜಮಾವಣೆ ಹಿನ್ನೆಲೆಯಲ್ಲಿ ಈ ಕಾಮಗಾರಿಗಳಲ್ಲಿ ಅತೀ ಮುಖ್ಯವಾದವುಗಳನ್ನು ತುರ್ತಾಗಿ ಮುಗಿಸಲು ತೀರ್ಮಾನಿಸಲಾಗಿದೆ.

ಪರ್ವತಾರೋಹಿ ಯೋಧರ ರವಾನೆ
ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಎದುರಾಳಿಯಿಂದ ಯಾವುದೇ ಕ್ಷಣದಲ್ಲಿ ಉಂಟಾಗಬಹುದಾದ ಆಕ್ರಮಣಗಳನ್ನು ಎದುರಿಸಲು ಪರ್ವತಗಳ ಕಡಿದಾದ ಪ್ರದೇಶಗಳನ್ನು ಏರಿ ಹೋಗಿ ಹೋರಾಡುವಲ್ಲಿ ನಿಷ್ಣಾತರೆನಿಸಿರುವ ಒಂದು ಸಾವಿರ ಪರ್ವತಾರೋಹಿಗಳ ಪಡೆಯೊಂದು ಗಡಿ ಪ್ರದೇಶವನ್ನು ತಲುಪಿದೆ.

ಎಲ್‌ಎಸಿಯ ಆಚೆ ಬದಿಯಲ್ಲಿ ಚೀನದ ಸೈನಿಕರ ಚಟುವಟಿಕೆಗಳ ಮೇಲೆ ಕಣ್ಣಿಡಲು ಈ ಪರ್ವತಾರೋಹಿಗಳನ್ನು ಬಳಸಿಕೊಳ್ಳಲಾಗುತ್ತದೆ.

ಗೆರಿಲ್ಲಾ ಮಾದರಿಯ ಸಮರದ ಪಟ್ಟುಗಳನ್ನು ಕಲಿತಿರುವ ಯೋಧರನ್ನು ಪ್ರತಿದಾಳಿಗೆ ಅಣಿಗೊಳಿಸ ಲಾಗುತ್ತಿದೆ. ಕಾರ್ಗಿಲ್‌ ಯುದ್ಧದಲ್ಲಿ ಭಾರತಕ್ಕೆ ಜಯ ತಂದುಕೊಟ್ಟಿದ್ದ ಇಂಥ ಪಟ್ಟುಗಳನ್ನು ನಮ್ಮ ಯೋಧರು ಮೊನಚು ಮಾಡಿಕೊಳ್ಳುತ್ತಿದ್ದಾರೆ.

ಹಿಂದಕ್ಕೆ ಸರಿಯಿರಿ: ಚೀನಕ್ಕೆ ತಾಕೀತು
ಎಲ್‌ಎಸಿ ಪ್ರದೇಶದಲ್ಲಿ ಚೀನದ ಸೈನಿಕರು ಈಗಿ ರುವ ಸ್ಥಳಗಳಿಂದ ಹಿಂದಕ್ಕೆ ಸರಿಯಬೇಕು. ಮೇ 4ಕ್ಕೆ ಮುನ್ನ ಎಲ್‌ಎಸಿಯ ಆಚೆ ಬದಿಯಲ್ಲಿ ಎಲ್ಲಿ ಇದ್ದರೋ ಅಲ್ಲಿಗೇ ಮರಳಬೇಕು ಎಂದು ಭಾರತ ಮತ್ತು ಚೀನ ನಡುವಣ ಲೆಫ್ಟಿನೆಂಟ್‌ ಜನರಲ್‌ ಮಟ್ಟದ 2ನೇ ಸುತ್ತಿನ ಮಾತುಕತೆಯಲ್ಲಿ ಭಾರತವು ಚೀನವನ್ನು ಆಗ್ರಹಿಸಿದೆ. ಜತೆಗೆ ಎಲ್‌ಎಸಿಗೆ ಸನಿಹ ಚೀನವು ವಿವಾದಾತ್ಮಕವಾಗಿ ನಿರ್ಮಿಸಿರುವ ಎಲ್ಲ ರೀತಿಯ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ತಾಕೀತು ಮಾಡಿದೆ.

2ನೇ ಸುತ್ತಿನ ಸಭೆ ಚೀನದ ಗಡಿಯೊಳಗಿನ ಚುಶೂಲ್‌ ಸೆಕ್ಟರ್‌ನ ಮೋಲ್ಡೋನಲ್ಲಿ ಸೋಮವಾರ ಬೆಳಗ್ಗೆ 11.30 ಗಂಟೆಗೆ ಆರಂಭವಾಗಿ, ತಡರಾತ್ರಿಯ ವರೆಗೂ ಮುಂದುವರೆದಿತ್ತು. ಭಾರತದ ನಿಯೋಗದ ನೇತೃತ್ವವನ್ನು 14ನೇ ಕಾಪ್ಸ್‌ìನ ಲೆ| ಜ| ಹರೀಂದರ್‌ ಸಿಂಗ್‌ ಅವರು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next