Advertisement
ರಷ್ಯಾ, ಚೀನಾ ಹಾಗೂ ಭಾರತದ ಜಂಟಿ ಹೇಳಿಕೆಯಲ್ಲಿ ಉಗ್ರ ಸಂಘಟನೆಗಳನ್ನು ಬೆಂಬಲಿಸಬಾರದು ಎಂಬ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದೆ. ಇದು ಪಾಕಿಸ್ತಾನಕ್ಕೆ ಚೀನಾ ನೀಡಿದ ಪ್ರಮುಖ ಸಂದೇಶವೂ ಹೌದು ಎಂದು ಹೇಳಲಾಗಿದೆ. ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದಕ್ಕೆ ಸಂಬಂಧಿಸಿದಂತೆ ಪದೇ ಪದೆ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಿಪಡಿಸುತ್ತಿತ್ತು. ಈ ಮೂಲಕ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತು. ಆದರೆ ಈ ಬಾರಿ ಚೀನಾ ಈ ಹೇಳಿಕೆಯನ್ನು ಬೆಂಬಲಿಸುವ ಮೂಲಕ ಪಾಕ್ ಪರವಾದ ತನ್ನ ನಿಲುವನ್ನು ಸಡಿಲಿಸಿದಂತಿದೆ. ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ನಿವಾರಿಸಲು ನಾವು ಜಂಟಿಯಾಗಿ ಶ್ರಮಿಸಬೇಕು ಎಂದು ಸಭೆಯಲ್ಲಿ ನಿಲುವಳಿ ಕೈಗೊಳ್ಳಲಾಗಿದೆ. ಅಲ್ಲದೆ, ಭಯೋತ್ಪಾದನೆ ಮತ್ತು ತೀವ್ರಗಾಮಿವಾದದ ಮೂಲ ನೆಲೆಯನ್ನು ನಿವಾರಿಸುವುದು ಅತ್ಯಂತ ಪ್ರಮುಖ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಸಭೆಯ ಕೊನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಭಯೋತ್ಪಾದನೆಯ ಮೂಲ ನೆಲೆ ಎಂಬ ಪದಪುಂಜವನ್ನು ವಿಶೇಷವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಯೇ ಹೇಳಲಾಗಿದೆ.
Related Articles
ಪುಲ್ವಾಮಾ ದಾಳಿ ಹಾಗೂ ಅದಕ್ಕೆ ಪ್ರತೀಕಾರವಾಗಿ ಬಾಲಕೋಟ್‌ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಯ ನಂತರದಲ್ಲಿ ಪಾಕಿಸ್ತಾನಕ್ಕೆ ಅಮೆರಿಕದಿಂದಲೂ ಎಚ್ಚರಿಕೆ ರವಾನೆಯಾಗಿದೆ. ಪಾಕಿಸ್ತಾನದ ಭಾಗದಲ್ಲಿನ ಉಗ್ರ ಸಂಘಟನೆಗಳ ಚಟುವಟಿಕೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಿ ಎಂದು ಬುಧವಾರ ಅಮೆರಿಕ ತಾಕೀತು ಮಾಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಜತೆ ಫೋನ್‌ನಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ಯಾವುದೇ ಸೇನಾ ಕ್ರಮವನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಭಾರತದೊಂದಿಗೂ ಮಾತುಕತೆ ನಡೆಸಿದ ಪಾಂಪಿಯೋ, ಈ ಭಾಗದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಕ್ರಮ ಕೈಗೊಳ್ಳುವ ಸಂಬಂಧ ಮಾತುಕತೆ ನಡೆಸಿದ್ದಾರೆ.
Advertisement