Advertisement

ಪಾಕಿಸ್ಥಾನಕ್ಕೆ ಹೋಗಿ ಬರುವ ಎಲ್ಲ ವಿಮಾನಗಳನ್ನು ರದ್ದುಪಡಿಸಿದ ಚೀನ

05:51 AM Mar 01, 2019 | udayavani editorial |

ಬೀಜಿಂಗ್‌ : ಭಾರತ -ಪಾಕ್‌ ನಡುವಿನ ಉದ್ವಿಗ್ನತೆಯ ಕಾರಣ ಚೀನ, ಪಾಕಿಸ್ಥಾನಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ತನ್ನ ಎಲ್ಲ ವಿಮಾನ ಯಾನಗಳನ್ನು ರದ್ದು ಪಡಿಸಿದೆ ಮತ್ತು ಪಾಕ್‌ ಆಗಸದ ಮೂಲಕ ಹಾರುವ ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗವನ್ನು ಬದಲಾಯಿಸಿದೆ ಎಂದು ಚೀನದ ಅಧಿಕೃತ ಮಾಧ್ಯಮ ವರದಿ ಮಾಡಿದೆ.

Advertisement

ಭಾರತದೊಂದಿಗಿನ ಉದ್ವಿಗ್ನತೆಯ ಪರಿಣಾಮವಾಗಿ ಪಾಕಿಸ್ಥಾನ ತನ್ನ ವಾಯು ಪ್ರದೇಶವನ್ನು ವಿಮಾನ ಹಾರಾಟಗಳಿಗೆ ಮುಚ್ಚಿರುವುದರಿಂದ ಯುರೋಪ್‌ ಮತ್ತು ಆಗ್ನೇಯ ಏಶ್ಯ ನಡುವಿನ ವಾಯ ಮಾರ್ಗ ತೀವ್ರವಾಗಿ ಬಾಧಿತವಾಗಿದೆ ಹಾಗೂ ವಿಶ್ವಾದ್ಯಂತ ಸಾವಿರಾರು ವಿಮಾನ ಪ್ರಯಾಣಿಕರು ತೀವ್ರ ಪರದಾಟಕ್ಕೆ ಗುರಿಯಾಗಿದ್ದಾರೆ. 

ಮಧ್ಯ ಪೂರ್ವದಿಂದ ಹೊರಡುವ ವಿಮಾನಗಳು ಸಾಮಾನ್ಯವಾಗಿ ಪಾಕ್‌ ಆಗಸ ಮತ್ತು ಭಾರತ – ಪಾಕ್‌ ಗಡಿ ಮಾರ್ಗವಾಗಿ ಹಾರುತ್ತವೆ. ಆದರೆ ಈಗಿನ ಉದ್ವಿಗ್ನ ಸನ್ನಿವೇಶದಲ್ಲಿ ಇವುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು ಅವು ಈಗ ಭಾರತ – ಮ್ಯಾನ್‌ಮಾರ್‌ ಅಥವಾ ಮಧ್ಯ ಏಶ್ಯ ಮಾರ್ಗವಾಗಿ ಪ್ರಯಾಣಿಸಿ ಚೀನವನ್ನು ಪ್ರವೇಶಿಸುತ್ತಿವೆ ಎಂದು ಪೌರ ವಾಯುಯಾನ ಪರಿಣತರು ಗ್ಲೋಬಲ್‌ ಟೈಮ್ಸ್‌ ಗೆ ತಿಳಿಸಿದ್ದಾರೆ. 

ಬೀಜಿಂಗ್‌ ಕ್ಯಾಪಿಟಲ್‌ ಇಂಟರ್‌ನ್ಯಾಶನಲ್‌ ಏರ್‌ ಪೋರ್ಟ್‌ ಪಾಕಿಸ್ಥಾನಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲ ವಿಮಾನಗಳ ಹಾರಾಟವನ್ನು ಮೊನ್ನೆ ಬುಧವಾರ ಮತ್ತು ನಿನ್ನೆ ಗುರುವಾರ ರದ್ದುಪಡಿಸಿತ್ತು ಎಂದು ಉತ್ತರ ಚೀನ ವಾಯ ಸಾರಿಗೆ ವ್ಯವಸ್ಥಾಪದ ವಿಭಾಗ ಗ್ಲೋಬಲ್‌ ಟೈಮ್ಸ್‌ಗೆ ಕಳುಹಿಸಿದ ಪ್ರಕಟನೆಯಲ್ಲಿ ತಿಳಿಸಿದೆ. 

ಈ ವಿಮಾನಗಳು ಈಗಿನ್ನು ಇವತ್ತು ಶುಕ್ರವಾರ ತಮ್ಮ ಹಾರಾಟವನ್ನು ನಿಗದಿತ ವೇಳಾ ಪಟ್ಟಿಯಂತೆ ಕೈಗೊಳ್ಳುತ್ತವೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ ಎಂದು ಸರಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. 

Advertisement

ಬ್ಯೂರೋ ಹೇಳಿರುವ ಪ್ರಕಾರ ಪ್ರತೀ ವಾರ 22 ವಿಮಾನಗಳು ಪಾಕಿಸ್ಥಾನಕ್ಕೆ ಹೋಗಿ ಬರುತ್ತವೆ; ಇವುಗಳಲ್ಲಿ ಚೀನ ಏರ್‌ ನ ಎರಡು ಮತ್ತು ಪಾಕಿಸ್ಥಾನ್‌ ಇಂಟರ್‌ ನ್ಯಾಶನಲ್‌ ನ ಎರಡು ವಿಮಾನಗಳು ಸೇರಿವೆ. 

Advertisement

Udayavani is now on Telegram. Click here to join our channel and stay updated with the latest news.

Next