Advertisement

ಗಡಿ ಅತಿಕ್ರಮಣಕ್ಕೆ ಬಿಡಲ್ಲ: ಚೀನ

05:25 AM Aug 02, 2017 | Karthik A |

ಬೀಜಿಂಗ್‌: ‘ಚೀನ ಎಂದೆಂದಿಗೂ ಆಕ್ರಮಣ ಮತ್ತು ಗಡಿ ವಿಸ್ತರಣೆಯಲ್ಲಿ ಭಾಗಿಯಾಗಿಲ್ಲ. ಆದರೆ ನಮ್ಮ ಗಡಿಯನ್ನು ಅತಿಕ್ರಮಿಸುವುದಕ್ಕೆ ಅಥವಾ ವಿಭಾಗಿಸುವುದಕ್ಕೆ ಅವಕಾಶ ವನ್ನೂ ನೀಡುವುದಿಲ್ಲ’ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಈ ಮೂಲಕ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಭಾರತಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಮೊನ್ನೆಯಷ್ಟೇ ಉತ್ತರ ಮಂಗೋಲಿಯಾ ಭಾಗದಲ್ಲಿ ನಡೆದ ಅತಿ ದೊಡ್ಡ ಮಿಲಿಟರಿ ಪರೇಡ್‌ನ‌ಲ್ಲಿ ಎಚ್ಚರಿಕೆ ರವಾನಿಸಿದ್ದ ಕ್ಸಿ ಜಿನ್‌ಪಿಂಗ್‌ ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ 90ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಚೀನದ ಕಮ್ಯೂನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ಸಿ ಅವರು ಹೀಗೆ ಹೇಳಿದ್ದಾರೆ.

Advertisement

‘ನಮ್ಮ ಸಾರ್ವಭೌಮತೆಗೆ ಧಕ್ಕೆ ತರುವಂತಹ ಹಣ್ಣನ್ನು ನಾವು ತಿನ್ನುತ್ತೇವೆಂದು ಯಾರೂ ನಿರೀಕ್ಷಿಸುವುದು ಬೇಡ. ಯುದ್ಧ ತಪ್ಪಿಸಿ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳಲು ಹಲವು ದಾರಿಗಳಿವೆ. ಆದರೆ ಮಿಲಿಟರಿ ಕ್ರಮ ಎನ್ನುವುದು ಕೊನೆಯ ಆಯ್ಕೆ. ಚೀನದ ಜನತೆ ಶಾಂತಿಯನ್ನು ಬಯಸುತ್ತಾರೆ’ ಎಂದು ಕ್ಸಿ ಹೇಳಿ ದ್ದಾರೆ. ಇದೇ ವೇಳೆ ಇತ್ತ ಚೀನ ಭಾರತ ಮಧ್ಯೆ ವಹಿವಾಟು ಕುಸಿಯುತ್ತಿರುವ ಬಗ್ಗೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಚೀನದ ಸಹವರ್ತಿ ಝಾಂಗ್‌ ಶಾನ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಔಷಧ ಕಂಪೆನಿ ಖರೀದಿಗೆ ತಡೆ
ಡೋಕ್ಲಾಂ ವಿವಾದ ಹಸಿರಾಗಿರುವಂತೆಯೇ, ಭಾರತದಲ್ಲಿ ಔಷಧ ತಯಾರಿಕಾ ಕಂಪೆನಿಯೊಂದನ್ನು ಖರೀದಿಸಲು ಚೀನದ ಶಾಂಘೈ ಫಾಸುನ್‌ ಫಾರ್ಮಾಸ್ಯುಟಿಕಲ್‌ ಗ್ರೂಪ್‌ ಕೊ. ನಡೆಸಿದ್ದ ಯತ್ನಕ್ಕೆ ಕೇಂದ್ರ ಸರಕಾರ ತಡೆ ನೀಡಿದೆ. ಭಾರತದ ಗ್ಲಾಂಡ್‌ ಫಾರ್ಮಾ ಕಂಪೆನಿಯ ಶೇ.86ರಷ್ಟು ಷೇರುಗಳನ್ನು 8,320 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಫಾಸುನ್‌ ಫಾರ್ಮಾಸ್ಯುಟಿಕಲ್‌ ಕಂಪೆನಿ ಉದ್ದೇಶಿಸಿತ್ತು. ಇದಕ್ಕೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಮಿತಿ ತಡೆ ನೀಡಿದೆ. ಚೀನದ ಕಂಪೆನಿಯೊಂದು ಭಾರತದಲ್ಲಿ ನಡೆಸಲುದ್ದೇಶಿಸಿದ ಅತಿ ದೊಡ್ಡ ಖರೀದಿ ಇದಾಗಿತ್ತು.

ಭಾರತಕ್ಕೆ ರಷ್ಯಾವೇ ಬೆಸ್ಟ್‌
ಕೆಲವೊಂದು ರಕ್ಷಣಾ ಸಲಕರಣೆ ಮತ್ತು ತಂತ್ರಜ್ಞಾನ ನೀಡಿಕೆಯಲ್ಲಿ ರಷ್ಯಾ ಹೊರತಾಗಿ ಬೇರಾವುದೇ ರಾಷ್ಟ್ರಗಳು ಭಾರತಕ್ಕೆ ನೆರವು ನೀಡಲಾರವು ಎಂದು ರಷ್ಯಾ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಭಾಗೀದಾರಿಕೆಯಲ್ಲಿ ಅಮೆರಿಕ, ಇಸ್ರೇಲ್‌, ಫ್ರಾನ್ಸ್‌ ಜತೆ ಭಾರತದ ಸಂಬಂಧ ವೃದ್ಧಿಸುತ್ತಿದ್ದರೂ ರಷ್ಯಾ ಈ ವಿಚಾರದಲ್ಲಿ ಮುಂದಿದೆ ಎಂದು ರಷ್ಯಾ ಸರಕಾರಿ ಸ್ವಾಮ್ಯದ ಕಂಪೆನಿ ರೋಸ್ಟೆಕ್‌ ಸ್ಟೇಟ್‌ ಕಾರ್ಪೊರೇಷನ್‌ನ ಮುಖ್ಯಸ್ಥ ಸೆರ್ಜಿ ಚೆಮೆಝೋವ್‌ ಹೇಳಿದ್ದಾರೆ. ಬೇರೆ ರಾಷ್ಟ್ರಗಳೊಂದಿಗೆ ಭಾರತ ವ್ಯವಹಾರ ನಡೆಸುತ್ತಿದೆ ಎಂದ ಮಾತ್ರಕ್ಕೆ ನಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆ ಇಲ್ಲ. ನಮ್ಮ ಮಧ್ಯೆ ಬೇರೆಯೇ ಆದ ಬಂಧ ಇದೆ ಎಂದೂ ಅವರು ಹೇಳಿದ್ದಾರೆ.

– ಸೇನಾ ಕ್ರಮ ಕೊನೆಯ ಆಯ್ಕೆ
– ಭಾರತಕ್ಕೆ ಚೀನ ಅಧ್ಯಕ್ಷ  ಕ್ಸಿ ಎಚ್ಚರಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next