ಬೀಜಿಂಗ್:ಭಾರತದ ಲಡಾಖ್ ಗಡಿಯಲ್ಲಿ ತಗಾದೆ ತೆಗೆದು ಸಂಘರ್ಷಕ್ಕೆ ಇಳಿದಿದ್ದ ಚೀನ ಇದೀಗ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ ದಕ್ಷಿಣ ಗಡಿ ಪ್ರದೇಶದಲ್ಲಿ ಬರೋಬ್ಬರಿ 2000 ಕಿಲೋ ಮೀಟರ್ ಉದ್ದದ ಮುಳ್ಳುತಂತಿಯ ಗೋಡೆಯನ್ನು ನಿರ್ಮಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಗಡಿಯಲ್ಲಿ ಬೃಹತ್ ಗೋಡೆ ಕಟ್ಟಲು ಮುಂದಾಗಿರುವ ಚೀನಾದ ನಿರ್ಧಾರವನ್ನು ಮ್ಯಾನ್ಮಾರ್ ಸೇನೆ ಬಲವಾಗಿ ವಿರೋಧಿಸಿದೆ. ಆದರೆ ಚೀನಾ ತನ್ನ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳುವ ಮೂಲಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ಹೇಳಿದೆ.
ಏತನ್ಮಧ್ಯೆ ಮ್ಯಾನ್ಮಾರ್ ಗಡಿಯಲ್ಲಿ ಚೀನಾ ಗೋಡೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಅಮೆರಿಕದ ಚಿಂತಕರ ಚಾಡಿ ಪ್ರತಿಕ್ರಿಯಿಸಿದ್ದು, ಚೀನಾದ ಈ ಪ್ರಯತ್ನ ವಿಸ್ತರಣಾವಾದದ ಆಲೋಚನೆಯಾಗಿದೆ. ಇದರಿಂದಾಗಿ ಮುಂಬರುವ ದಶಕಗಳಲ್ಲಿ ದಕ್ಷಿಣ ಏಷ್ಯಾ ದೇಶಗಳ ಜತೆಗಿನ ಸಂಘರ್ಷ ಹೆಚ್ಚಳವಾಗಲಿದೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ:ಬಾಲಂಗೋಚಿಗಳ ಪೆವಿಲಿಯನ್ ಪರೇಡ್: ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲ್ ಔಟ್
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ತನ್ನ ವರದಿಯಲ್ಲಿ, ಮ್ಯಾನ್ಮಾರ್ ನಿಂದ ಚೀನಾಕ್ಕೆ ಅಕ್ರಮವಾಗಿ ನುಸುಳುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಗೋಡೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ. ಚೀನಾದ ನೈರುತ್ಯ ದಿಕ್ಕಿನ ಯುನ್ನಾನ್ ಪ್ರಾಂತ್ಯದ ಗಡಿಯಲ್ಲಿ 9 ಮೀಟರ್(ಸುಮಾರು 30 ಅಡಿ) ಎತ್ತರದ ಮುಳ್ಳುತಂತಿಯ ಗೋಡೆಯನ್ನು ನಿರ್ಮಿಸಲಾಗುವುದು ಎಂದು ವರದಿ ಹೇಳಿದೆ.
ಚೀನಾ ಗೋಡೆ ಕಟ್ಟುವ ಹಿಂದಿನ ಉದ್ದೇಶವೇನು?
ಅಕ್ರಮ ನುಸುಳುಕೋರರನ್ನು ತಡೆಗಟ್ಟುವ ನಿಟ್ಟಿನಲ್ಲಿ ಮ್ಯಾನ್ಮಾರ್ ಗಡಿಯಲ್ಲಿ ಬೃಹತ್ ಗೋಡೆ ಕಟ್ಟುವ ನಿರ್ಧಾರ ತೆಗೆದುಕೊಂಡಿರುವುದಾಗಿ ಚೀನಾ ಹೇಳುತ್ತಿದೆ. ಆದರೆ ಆರ್ ಎಫ್ ಎ ವರದಿ ಪ್ರಕಾರ, ಚೀನಾ ಸರ್ವಾಧಿಕಾರ ಆಡಳಿತದ ವಿರುದ್ಧ ಅಸಮಾಧಾನಗೊಂಡು ಪರಾರಿಯಾಗುವ ಜನರನ್ನು ತಡೆಗಟ್ಟುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ವಿವರಿಸಿದೆ.