Advertisement

ಯುದ್ಧಕ್ಕೆ ಕಾರಣವಾಗಬಲ್ಲುದೇ ಚೀನದ ಗಡಿ ಗಲಾಟೆ?

10:43 PM Oct 28, 2021 | Team Udayavani |

ಗಡಿ ವಿಚಾರದಲ್ಲಿ ಪಾಕಿಸ್ಥಾನಕ್ಕಿಂತಲೂ ಕೆಟ್ಟದಾಗಿ ವರ್ತಿಸುತ್ತಿರುವ ನೆರೆಯ ದೇಶ ಚೀನ, ತನ್ನ ಗಡಿ ಕಾಯ್ದುಕೊಳ್ಳಲು ಹೊಸದೊಂದು ಕಾಯ್ದೆ ಜಾರಿಗೆ ತಂದಿದೆ. ತನ್ನ ಗಡಿಯನ್ನು “ಪವಿತ್ರ ಮತ್ತು ಉಲ್ಲಂ ಸಲಾಗದ್ದು’ ಎಂದು ಕರೆದುಕೊಂಡಿರುವ ಅದು, ಯಾವುದೇ ಸಂದರ್ಭದಲ್ಲೂ ಇದನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಂಡಿದೆ. ಚೀನದ ಈ ಹೊಸ ಗಡಿ ಕಾಯ್ದೆಗೆ ಭಾರತ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಗಡಿ ವಿವಾದ ಕುರಿತಂತೆ ಮಾತುಕತೆ ನಡೆಸುವ ವೇಳೆ, ಇಂಥದ್ದೊಂದು ಕಾಯ್ದೆ ಏಕೆ ತರಬೇಕಿತ್ತು ಎಂದು ಪ್ರಶ್ನಿಸಿದೆ. ಹಾಗೆಯೇ ಇದನ್ನು ಜಾರಿ ಮಾಡಬಾರದು ಎಂದೂ ಹೇಳಿದೆ. ಚೀನದ ಈ ಹೊಸ ಗಡಿ ಕಾಯ್ದೆ ಭಾರತ ಮತ್ತು ಚೀನದ ನಡುವೆ ಹೊಸ ವಿವಾದಕ್ಕೆ ಅಥವಾ ಯುದ್ಧಕ್ಕೆ ಕಾರಣವಾಗಬಲ್ಲುದೇ ಎಂಬ ಅನುಮಾನಗಳೂ ಮೂಡಿವೆ.

Advertisement

ಚೀನ ಎಂಬ ಕಿರಿಕ್‌:

ಚೀನ ದೇಶ ಭಾರತವಷ್ಟೇ ಅಲ್ಲ, ಒಟ್ಟು 14 ದೇಶಗಳ ಜತೆಗೆ ಗಡಿ ಹಂಚಿಕೊಂಡಿದೆ. ವಿಚಿತ್ರವೆಂದರೆ ಹೆಚ್ಚು ಕಡಿಮೆ ಈ ಎಲ್ಲ ದೇಶಗಳ ಜತೆಗೂ ಒಂದಿಲ್ಲೊಂದು ವಿವಾದಗಳನ್ನು ಮೈಗತ್ತಿಸಿಕೊಂಡಿದೆ ಚೀನ. ಅಂದರೆ ಚೀನ ಬೇರೆ ದೇಶಗಳೊಂದಿಗೆ ಒಟ್ಟು 22,457 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ರಷ್ಯಾ ಮತ್ತು ಮಂಗೋಲಿಯಾ ಬಿಟ್ಟರೆ ಭಾರತವೇ ಚೀನ ಜತೆ ಹೆಚ್ಚು ಉದ್ದದ ಗಡಿ ಹಂಚಿಕೊಂಡಿರುವುದು. ವಿಚಿತ್ರವೆಂದರೆ ರಷ್ಯಾ ಮತ್ತು ಮಂಗೋಲಿಯಾ ಜತೆ ಗಡಿ ವಿವಾದವಿದ್ದರೂ ಇಲ್ಲಿ ಸಂಘರ್ಷದ ವಾತಾವರಣವಿಲ್ಲ. ಆದರೆ, ಭಾರತದಂತೆಯೇ ಭೂತಾನ್‌ ಜತೆಗೂ ಚೀನ ಗಡಿ ವಿವಾದ ಇರಿಸಿಕೊಂಡಿದೆ.

ಜ.1ರಿಂದಲೇ ಜಾರಿ :

ಅ.23ರಂದು ಚೀನದ ನ್ಯಾಶನಲ್‌ ಪೀಪಲ್ಸ್‌ ಕಾಂಗ್ರೆಸ್‌ನ ಸ್ಥಾಯೀ ಸಮಿತಿ, “ದೇಶದ ಗಡಿಯನ್ನು ರಕ್ಷಣೆ ಮಾಡುವ ಕಾಯ್ದೆ’ಗೆ ಒಪ್ಪಿಗೆ ನೀಡಿತು. ಇದು ಜ.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಈ ಕಾಯ್ದೆ ಕೇವಲ ಭಾರತವನ್ನು ಉದ್ದೇಶಿಸಿ ಮಾಡಿದ್ದಲ್ಲ. ಚೀನ ಜತೆಗೆ ಗಡಿ ಹಂಚಿಕೊಂಡಿರುವ ಎಲ್ಲ 14 ದೇಶಗಳ ಕುರಿತಂತೆಯೂ ಮಾಡಿಕೊಂಡಿರುವ ಕಾಯ್ದೆ. ಹಾಗೆಯೇ ದೇಶೀಯವಾಗಿ ಗಡಿಯನ್ನು ಕಾಯ್ದುಕೊಳ್ಳುವ ವಿಚಾರಕ್ಕಿಂತ, ನೆರೆ ದೇಶಗಳ ಜತೆ ಜಗಳ ಮಾಡಿಕೊಳ್ಳುವ ಉದ್ದೇಶದಂತೆ ಈ ಕಾಯ್ದೆ ರೂಪಿಸಿಕೊಳ್ಳಲಾಗಿದೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ.

Advertisement

ಏನಿದು ಚೀನದ ಕಾಯ್ದೆ? :

ಚೀನದ ಸ್ಥಳೀಯ ಮಾಧ್ಯಮಗಳ ಪ್ರಕಾರ, “ಚೀನದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯು ಪವಿತ್ರವಾದದ್ದು ಮತ್ತು ಉಲ್ಲಂ ಸಲಾಗದ್ದು’. ಹಾಗೆಯೇ ಈ ಗಡಿಯನ್ನು ಪವಿತ್ರವಾಗಿಯೇ ಉಳಿಸಿಕೊಳ್ಳುವ ಸಂಬಂಧ ಯುದ್ಧವೂ ಸೇರಿದಂತೆ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು.  ಇನ್ನೂ ಮುಂದೆ ಹೋಗಿ, ಗಡಿಯಲ್ಲಿ ಭದ್ರತೆ ಹೆಚ್ಚಿಸುವುದು, ಗಡಿ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳನ್ನು ಕೈಗೊಳ್ಳುವುದು ಮತ್ತು ಸಾರ್ವಜನಿಕ ಸೇವೆಗಳು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು, ಈ ಪ್ರದೇಶಗಳಿಗೆ ಹೋಗಿ ನೆಲೆಸುವಂತೆ ಮತ್ತು ಕೆಲಸ ಮಾಡುವಂತೆ ಜನರ ಮನವೊಲಿಕೆ ಮಾಡುವುದು, ಹಾಗೆಯೇ ಗಡಿ ಪ್ರದೇಶಗಳಲ್ಲಿ ಭದ್ರತಾ ಪಡೆಗಳು, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ನಡುವೆ ಸಮನ್ವಯ ಸಾಧಿಸುವುದು ಈ ಹೊಸ ಕಾಯ್ದೆಯಲ್ಲಿ ಸೇರಿದೆ.

ಮೂಗಿಗೆ ತುಪ್ಪ ಸವರುವ ಕೆಲಸ : ‌

ವಿಚಿತ್ರವೆಂದರೆ ಗಡಿಯಲ್ಲಿ ಎಲ್ಲ ಸಂಗತಿಗಳನ್ನು ಭದ್ರ ಮಾಡಿಕೊಳ್ಳಬೇಕು ಎಂದು ಹೇಳುತ್ತಲೇ ಚೀನ, ನೆರೆ ದೇಶಗಳ ಮೂಗಿಗೆ ತುಪ್ಪ ಸವರುವ ಕೆಲಸವನ್ನೂ ಮಾಡಿದೆ. ಗಡಿಯಲ್ಲಿ ನೆರೆಯ ದೇಶಗಳ ಜತೆಗೆ ಸಮಾನತೆ, ಪರಸ್ಪರ ನಂಬಿಕೆ, ಸ್ನೇಹಯುತ ಸಂಪರ್ಕ, ಪರಸ್ಪರ ಮಾತುಕತೆಯ ಮೂಲಕ ಗಡಿ ವಿವಾದವನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬಹುದು ಎಂಬ ಸಂಗತಿಯನ್ನೂ ಉಲ್ಲೇಖೀಸಲಾಗಿದೆ.

ಗಡಿಗಳಲ್ಲಿ ಗ್ರಾಮಗಳು :

ಚೀನ ಸರಕಾರವು ಗಡಿಗಳಲ್ಲಿ ಗ್ರಾಮಗಳನ್ನು ನಿರ್ಮಿಸಿ ಅಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚು ಮಾಡುತ್ತಿರುವುದೂ ಇದರ ಒಂದು ಅಂಗವೇ ಎಂದು ವಿಶ್ಲೇಷಿಸಲಾಗಿದೆ. ಈಗಾಗಲೇ ಚೀನ ಸರಕಾರ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಇಂಥ ನೂರಾರು ಗ್ರಾಮಗಳನ್ನು ರಾತೋರಾತ್ರಿ ನಿರ್ಮಾಣ ಮಾಡಿ ಅಲ್ಲಿ ಚೆನ್ನಾಗಿ ಮೂಲ ಸೌಕರ್ಯ ನೀಡಲಾಗಿದೆ. ಇಂಥ ಗ್ರಾಮಗಳು ಸೃಷ್ಟಿಯಾದ ಮೇಲೆ, ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸಲು ಸಾಧ್ಯವಾಗುವುದಿಲ್ಲ. ಆಗ ಅವರಿಗೇ ವಿವಾದಿತ ಪ್ರದೇಶ ಹೋದಂತೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೇನು  ಸಂದೇಶ? :

ಈ ಕಾಯ್ದೆಯನ್ನು ನೇರವಾಗಿ ಭಾರತವನ್ನು ಗಮನದಲ್ಲಿ ಇರಿಸಿಕೊಂಡೇ ತರಲಾಗಿದೆ ಎಂಬುದು ರಕ್ಷಣ ತಜ್ಞರ ಅಭಿಪ್ರಾಯ. ಅಂದರೆ ಕಾಯ್ದೆಯಲ್ಲಿ ಉಲ್ಲೇಖೀಸಿರುವ “ಪವಿತ್ರ ಮತ್ತು ಉಲ್ಲಂ ಸಲಾಗದ್ದು’ ಎಂಬ ಪದಗಳು, ನಾವು ಗಡಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ ಎಂಬುದನ್ನು ತೋರಿದಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಲಡಾಖ್‌, ಅರುಣಾಚಲ ಪ್ರದೇಶ ಸೇರಿದಂತೆ ಭಾರತದ ಗಡಿಯುದ್ದಕ್ಕೂ ಚೀನ ತರಲೆ ತೆಗೆಯುತ್ತಲೇ ಇದೆ. ಲಡಾಖ್‌ ಗಡಿ ವಿಚಾರದಲ್ಲಿ ಈಗಾಗಲೇ 13 ಸುತ್ತಿನ ಕಮಾಂಡರ್‌ ಮಟ್ಟದ ಮಾತುಕತೆಗಳೂ ಆಗಿವೆ. ಈಗಲೂ ಲಡಾಖ್‌ ಸುತ್ತಮುತ್ತಲಿನ ವಿವಾದಿತ ಪ್ರದೇಶಗಳಿಂದ ಹಿಂದೆ ಸರಿಯಲು ಚೀನ ತಕರಾರು ತೆಗೆಯುತ್ತಿದೆ.

ಈಗ ತನ್ನ ಕಾಯ್ದೆಯಲ್ಲಿ ಪವಿತ್ರ ಮತ್ತು ಉಲ್ಲಂಘಿಸಲಾಗದ್ದು ಎಂದು ಸೇರಿಸಿಕೊಂಡ ಮೇಲೆ, ಗಡಿಯಿಂದ ಚೀನ ಹಿಂದೆ ಸರಿಯುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಚೀನ ಗಡಿಯಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ್ದ ನಿವೃತ್ತ ಸೇನಾಧಿಕಾರಿಯೊಬ್ಬರು, ಚೀನದ ಈ ಕಾಯ್ದೆಯನ್ನು, ಗಡಿ ರೇಖೆಯನ್ನು ಉಲ್ಲಂ ಸಲೆಂದೇ ಚೀನ ತಂದಿದೆ ಎಂದಿದ್ದಾರೆ. ಅಂದರೆ, ಚೀನ ತನ್ನ ಗಡಿಯನ್ನು ಪವಿತ್ರ ಎಂದು ಕರೆದುಕೊಂಡ ಮೇಲೆ, ಅದು ಗಡಿಯಿಂದ ವಾಪಸ್‌ ಹೋಗುವುದಿಲ್ಲ. ನಾವಷ್ಟೇ ವಾಪಸ್‌ ಬರಬೇಕು ಅಷ್ಟೇ ಎಂದು ಹೇಳಿದ್ದಾರೆ. ಜತೆಗೆ, ಇನ್ನು ಮುಂದೆ ಅವರನ್ನು ವಿವಾದಿತ ಪ್ರದೇಶಗಳಿಂದ ವಾಪಸ್‌ ಕಳುಹಿಸುವುದು ಕಷ್ಟಕರವಾಗಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಈ ಹೊಸ ಕಾಯ್ದೆ ಎರಡೂ ದೇಶಗಳ ನಡುವಿನ ಮಾತುಕತೆಯನ್ನು ಇನ್ನಷ್ಟು ಕ್ಲಿಷ್ಟಕರ ಮಾಡಿದೆ ಎಂದಿದ್ದಾರೆ. ಅಲ್ಲದೇ, ಗಡಿಯಲ್ಲಿ ವಿವಾದ ಇರುವಾಗ ಚೀನ ಇಂಥ ಕಾಯ್ದೆಯನ್ನು ಏಕೆ ತರಬೇಕಿತ್ತು? ಇಲ್ಲಿ ಸ್ಪಷ್ಟವಾದ ವಿಚಾರವೊಂದೇ, ಅವರಿಗೆ ಗಡಿ ವಿವಾದ ಇತ್ಯರ್ಥವಾಗುವುದು ಬೇಕಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next